ಮುಂಬೈ (ಮಹಾರಾಷ್ಟ್ರ):ಗೊರಗಾನ್‌ನಲ್ಲಿರುವ ಜಿ+5 ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ಇದೇ ವೇಳೆ 51 ಮಂದಿ ಗಾಯಗೊಂಡಿದ್ದು, 14 ಜನರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಮುಂಬೈನ ಟ್ರಾಮಾ ಕೇರ್ ಮತ್ತು ಕೂಪರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿಯಿಂದ 50ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.
ಪಶ್ಚಿಮ ಗೋರೆಗಾಂವ್‌ನ ಆಫ್ ಎಂಜಿ ರಸ್ತೆಯಲ್ಲಿರುವ ಜೈ ಭವಾನಿ ಕಟ್ಟಡದಲ್ಲಿ ಶುಕ್ರವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಇನ್ನೂ ಅನೇಕ ಜನರು ಕಟ್ಟಡದಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿಯಿದ್ದು, ಅವರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದರು.
ಅಧಿಕಾರಿಗಳ ಮಾಹಿತಿ ಪ್ರಕಾರ, ಗೋರೆಗಾಂವ್‌ನ ಎಂಜಿ ರಸ್ತೆಯಲ್ಲಿರುವ ಜೈ ಭವಾನಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯು ನೆಲದ ಮೇಲಿನ ಅಂಗಡಿಗಳು, ಸ್ಕ್ರ್ಯಾಪ್ ವಸ್ತುಗಳು ಮತ್ತು ನಿಲುಗಡೆ ಮಾಡಿದ ವಾಹನಗಳಿಗೂ ಆವರಿಸಿದೆ. ಟೆರೇಸ್ ಸೇರಿದಂತೆ ವಿವಿಧ ಮಹಡಿಗಳಲ್ಲಿ ಜನರು ಸಿಲುಕಿಕೊಂಡು ಪರದಾಡುತ್ತಿದ್ದಾರೆ. ಘಟನೆಯಲ್ಲಿ ಸುಮಾರು 30 ವಾಹನಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ದಳ ಮತ್ತು ಸ್ಥಳೀಯ ಪೊಲೀಸರು ಯಾವ ಕಾರಣಕ್ಕೆ ಬೆಂಕಿ ತಗುಲಿದೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.