ನವದೆಹಲಿ:ಅಬಕಾರಿ ನೀತಿಯಲ್ಲಿ ಹಗರಣ ಆರೋಪದ ಮೇಲೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ಸಿಬಿಐ 9 ಗಂಟೆ ವಿಚಾರಣೆ ನಡೆಸಿತು. ಇದು ಆಪ್ ಮತ್ತು ಬಿಜೆಪಿ ಮಧ್ಯೆ ವಾಗ್ಸಮರಕ್ಕೆ ಕಾರಣವಾಗಿದೆ. "ಆಪರೇಷನ್ ಕಮಲದ ಭಾಗ" ಎಂದು ಆಪ್ ಆರೋಪಿಸಿದರೆ, "ಆಪರೇಷನ್ ಅಸಹಕಾರ" ಎಂದು ಬಿಜೆಪಿ ಟೀಕಿಸಿದೆ.
ವಿಚಾರಣೆಗೆ ಹಾಜರಾಗಲು ಸಿಬಿಐ ನೋಟಿಸ್ ಜಾರಿ ಮಾಡಿದ್ದರಿಂದ ಮನೀಶ್ ಸಿಸೋಡಿಯಾ ಅವರು ನಿನ್ನೆ ಅಧಿಕಾರಿಗಳ ಮುಂದೆ ಹಾಜರಾಗಿ 9 ಗಂಟೆಗಳ ಕಾಲ ವಿಚಾರಣೆ ಎದುರಿಸಿದರು.
ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಮನೀಶ್ ಸಿಸೋಡಿಯಾ, ಇದು ಆಪರೇಷನ್ ಕಮಲದ ಭಾಗವಾಗಿದೆ. ನನ್ನ ವಿರುದ್ಧದ ಪ್ರಕರಣ, ವಿಚಾರಣೆ ಸಂಪೂರ್ಣ ಸುಳ್ಳಾಗಿದೆ. ವಿಚಾರಣೆಯ ವೇಲೆ ಸಿಬಿಐ ಅಧಿಕಾರಿಗಳೇ ಆಪ್ ತೊರೆದರೆ ಮುಖ್ಯಮಂತ್ರಿ ಹುದ್ದೆ ಆಫರ್ ನೀಡಿದರು. ನೀವ್ಯಾಕೆ ಇನ್ನೂ ಆಪ್ನಲ್ಲಿದ್ದೀರಿ, ಬಿಜೆಪಿಗೆ ಬನ್ನಿ ಎಂದು ಕರೆದರು ಎಂದು ಗಂಭೀರ ಆರೋಪ ಮಾಡಿದರು.
ನಾನು ಆಮ್ ಆದ್ಮಿ ಪಾರ್ಟಿ ಬಿಟ್ಟು ಎಲ್ಲಿಯೂ ಬರುವುದಿಲ್ಲಿ. ನನಗೆ ಸಿಎಂ ಆಗುವ ಆಸೆ ಇಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತಂದು, ಬಡವರ ಮಕ್ಕಳೂ ಕೂಡ ಉನ್ನತ ಶಿಕ್ಷಣ ಹೊಂದುವಂತೆ ಮಾಡುವುದು ನನ್ನ ಗುರಿ ಎಂದರು.
ಸಿಬಿಐ ನಿರಾಕರಣೆ:ವಿಚಾರಣೆಯ ವೇಳೆ ಮನೀಶ್ ಸಿಸೋಡಿಯಾರನ್ನು ಬಿಜೆಪಿ ಸೇರಲು ಆಫರ್ ಮಾಡಿದ ಆರೋಪವನ್ನು ಸಿಬಿಐ ನಿರಾಕರಿಸಿದೆ. ಅಂತಹ ಯಾವುದೇ ಆಫರ್ ನೀಡಲಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತ್ರ ಅವರನ್ನು ವಿಚಾರಣೆ ನಡೆಸಲಾಗಿದೆ. ಮನೀಶ್ ವಿರುದ್ಧದ ಅಬಕಾರಿ ಕೇಸ್ನ ಮಾಹಿತಿಯನ್ನು ಕಲೆಹಾಕಲು ಅವರನ್ನು ವಿಚಾರಣೆ ನಡೆಸಲಾಗಿದೆ. ಇದರಲ್ಲಿ ರಾಜಕೀಯ ಮಾಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೀಶ್ ವಿರುದ್ಧ ಮುಗಿಬಿದ್ದ ಬಿಜೆಪಿ:ಇನ್ನು ಮನೀಶ್ ಸಿಸೋಡಿಯಾರ ಗಂಭೀರ ಆರೋಪದ ವಿರುದ್ಧ ಟೀಕಾಪ್ರಹಾರ ಮಾಡಿರುವ ಬಿಜೆಪಿ, ಕಳ್ಳ ತಾನು ಕಳ್ಳತನ ಮಾಡಿದ್ದೇನೆ ಎಂದು ಒಪ್ಪಿಕೊಳ್ಳುವುದಿಲ್ಲ. ಹಾಗೆಯೇ ಮನೀಶ್ ಸಿಸೋಡಿಯಾ ಕೂಡ ವಿಚಾರಣೆ ಎದುರಿಸಿದ ಬಳಿಕ ತನ್ನಿಂದ ತಪ್ಪಾಗಿದೆ ಎಂದು ಹೇಳುತ್ತಾರೆಯೇ ಎಂದು ತರಾಟೆಗೆ ತೆಗೆದುಕೊಂಡಿದೆ.
ಅಬಕಾರಿ ನೀತಿಯಲ್ಲಿ 144 ಕೋಟಿ ರೂಪಾಯಿ ಸರ್ಕಾರಕ್ಕೆ ನಷ್ಟ ಉಂಟಾಗಿದೆ. ಈ ಬಗ್ಗೆ ಪ್ರಶ್ನೆ ಎದುರಿಸದೇ ಆರೋಪಿಗಳಾದ ಮನೀಶ್ ರಾಜಕೀಯ ಮಾಡುತ್ತಿದ್ದಾರೆ. ಇದೊಂದು ಆಪರೇಷನ್ ಅಸಹಕಾರ, ಭ್ರಷ್ಟಾಚಾರವನ್ನು ಜೀವಂತವಾಗಿಡುವ ಹುನ್ನಾರ. ದೆಹಲಿ ಸರ್ಕಾರ, ಸಿಎಂ ಮತ್ತು ಡಿಸಿಎಂ ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಪ್ರಕರಣದ ವಿಚಾರಣೆಯಿಂದ ತಪ್ಪಸಿಕೊಳ್ಳಲು ಸಿಬಿಐ ಮೇಲೆಯೇ ಗೂಬೆ ಕೂರಿಸುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಆರೋಪಿಸಿದರು.
ಸಿಬಿಐ ಸ್ವತಂತ್ರ ಸಂಸ್ಥೆಯಾಗಿದೆ. ಅದು ಕಾನೂನಾತ್ಮಕ ಚೌಕಟ್ಟಿನಲ್ಲಿ ಕೆಲಸ ಮಾಡುತ್ತದೆ. ಅಂತಹ ಸಂಸ್ಥೆ ಬಿಜೆಪಿಯ ಪರವಾಗಿ ಕೆಲಸ ಮಾಡಲು ಹೇಗೆ ಸಾಧ್ಯ. ರಾಜ್ಯ ಬೊಕ್ಕಸಕ್ಕೆ ನಷ್ಟ ಮಾಡಿ, ಅದನ್ನು ಆಪ್ ಸಮರ್ಥಿಸಿಕೊಳ್ಳುತ್ತಿದೆ ಎಂದು ಟೀಕಿಸಿದರು.
ಓದಿ:ಖರ್ಗೆಗೆ ಒಳ್ಳೆಯದಾಗಲಿ ಅಂತ ಫೋನ್ನಲ್ಲಿ ಹಾರೈಸಿದ ಸಿದ್ದರಾಮಯ್ಯ.. ಕಾರಣ?!