ಉತ್ತರಕಾಶಿ: ಸಿಲ್ಕ್ಯಾರಾ ಸುರಂಗದ ಅವಶೇಷಗಳಡಿ ಸಿಲುಕಿರುವ ಆಗರ್ ಯಂತ್ರದ ಭಾಗಗಳನ್ನು ಕತ್ತರಿಸಿ ಹೊರತೆಗೆಯಲು ಹೈದರಾಬಾದ್‌ನಿಂದ ಪ್ಲಾಸ್ಮಾ ಕಟ್ಟರ್ ಅನ್ನು ಭಾನುವಾರ ಇಲ್ಲಿಗೆ ತರಿಸಲಾಗಿದೆ. ರಕ್ಷಣಾ ಕಾರ್ಯವನ್ನು ಪುನರಾರಂಭಿಸಲು ಆಗರ್ ಯಂತ್ರವನ್ನು ಸಂಪೂರ್ಣವಾಗಿ ಹೊರತೆಗೆಯುವುದು ಅಗತ್ಯವಾಗಿದೆ. ಆಗರ್ ಯಂತ್ರ ಹೊರತೆಗೆದರೆ ಮಾತ್ರ ಮ್ಯಾನುವಲ್ ಆಗಿ ಪೈಪ್ಗಳನ್ನು ಅವಶೇಷಗಳಡಿ ತೂರಿಸಿ ರಕ್ಷಣಾ ಮಾರ್ಗ ಸಿದ್ಧಪಡಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಸಿಲ್ಕ್ಯಾರಾ ಸುರಂಗದ ಅವಶೇಷಗಳಡಿ ಕಳೆದ 14 ದಿನಗಳಿಂದ 41 ಕಾರ್ಮಿಕರು ಸಿಲುಕಿದ್ದು, ಇವರನ್ನು ಹೊರತರಲು ಭರದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, "ಹೈದರಾಬಾದ್‌ನಿಂದ ತರಲಾದ ಪ್ಲಾಸ್ಮಾ ಯಂತ್ರ ಇಂದು ಬೆಳಿಗ್ಗೆಯಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಕತ್ತರಿಸುವಿಕೆ ವೇಗವಾಗಿ ನಡೆಯುತ್ತಿದೆ. ಇನ್ನೂ 14 ಮೀಟರ್ ದೂರ ಕೊರೆಯಬೇಕಿದೆ" ಎಂದು ಹೇಳಿದರು. ಒಂದು ಡ್ರಿಲ್ ಯಂತ್ರವನ್ನು ಸಹ ಬೆಟ್ಟದ ಮೇಲೆ ನಿಯೋಜಿಸಲಾಗಿದ್ದು, ಇದು ಸುರಂಗದೊಳಗೆ ಲಂಬವಾಗಿ ರಂಧ್ರ ಕೊರೆಯಲಿದೆ. ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ಭಾರತೀಯ ಸೇನೆಯ ಕಾರ್ಪ್ಸ್ ಆಫ್ ಎಂಜಿನಿಯರ್ಸ್ನ ಮದ್ರಾಸ್ ಸ್ಯಾಪ್ಪರ್ಸ್ ಘಟಕವು ಭಾನುವಾರ ಸ್ಥಳಕ್ಕೆ ಆಗಮಿಸಿದೆ.