ನವದೆಹಲಿ:ದೇಶ ಮತ್ತು ವಿದೇಶದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿರುವ ಪ್ರತ್ಯೇಕತಾವಾದಿ ಖಲಿಸ್ತಾನ್ ಗುಂಪು ದೇಶದ ರಾಜಧಾನಿ ದೆಹಲಿಯಲ್ಲಿ ಖಲಿಸ್ತಾನ್ ಪರ ಘೋಷಣೆಗಳನ್ನು ಬರೆಯುವ ಮೂಲಕ ಪುಂಡಾಟಿಕೆ ಮೆರೆದಿದೆ. ಮೆಟ್ರೋ ನಿಲ್ದಾಣಗಳ ಮೇಲೆ ಬರಹಗಳನ್ನು ಗೀಚಲಾಗಿದ್ದು, ಅವುಗಳನ್ನು ಪೊಲೀಸರು ಅಳಿಸಿದ್ದಾರೆ.
ಭಾರತದ ಅಧ್ಯಕ್ಷತೆಯಲ್ಲಿ ಮುಂದಿನ ತಿಂಗಳು ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಗೂ ಪ್ರತ್ಯೇಕತಾವಾದಿ ಖಲಿಸ್ತಾನ್ ಗುಂಪು ಮತ್ತೆ ಬಾಲಬಿಚ್ಚಿದೆ. ಸಿಖ್ಸ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ನ ಶಂಕಿತ ಸದಸ್ಯರು ನಗರದ ಮೆಟ್ರೋ ನಿಲ್ದಾಣ ಗೋಡೆಗಳ ಮೇಲೆ ಐದಕ್ಕೂ ಹೆಚ್ಚು ಕಡೆ ಉಗ್ರ ಹೇಳಿಕೆಗಳನ್ನು ಗೀಚಿದ್ದಾರೆ. ಪೊಲೀಸರು ಬರಹಗಳನ್ನು ವಿರೂಪಗೊಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು.
ಖಲಿಸ್ತಾನ್ ಜಿಂದಾಬಾದ್ ಘೋಷಣೆ :ದೆಹಲಿ ಪೊಲೀಸರು ಹಂಚಿಕೊಂಡ ಚಿತ್ರಗಳಲ್ಲಿ, ಮೆಟ್ರೋ ನಿಲ್ದಾಣಗಳ ಗೋಡೆಗಳ ಮೇಲೆ ದೆಹಲಿ ಬನೇಗಾ ಖಲಿಸ್ತಾನ್ ಮತ್ತು ಖಲಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಬರೆಯಲಾಗಿದೆ. ಸಿಖ್ಸ್ ಫಾರ್ ಜಸ್ಟಿಸ್ (SFJ) ಸದಸ್ಯರು ಬರೆದಿರುವ ಖಲಿಸ್ತಾನ್ ಪರ ಘೋಷಣೆಗಳನ್ನು ವಿರೂಪಗೊಳಿಸಿದ ದೃಶ್ಯಗಳನ್ನೂ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಐದು ಕಡೆ ಪ್ರಚೋದನಾತ್ಮಕ ಗೋಡೆ ಬರಹ :ಶಂಕಿತ ಖಲಿಸ್ತಾನಿ ಪರ ಕಾರ್ಯಕರ್ತರು ದೆಹಲಿಯ ಶಿವಾಜಿ ಪಾರ್ಕ್‌ನಿಂದ ಪಂಜಾಬಿ ಬಾಗ್‌ವರೆಗಿನ ಮೆಟ್ರೋ ನಿಲ್ದಾಣಗಳ ಗೋಡೆಗಳ ಮೇಲೆ ಖಲಿಸ್ತಾನಿ ಪರ ಬರೆದಿದ್ದ ಘೋಷಣೆಗಳ ಬರಹಗಳನ್ನು ವಿರೂಪಗೊಳಿಸಲಾಗಿದೆ. ಇದರ ವಿರುದ್ಧ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕ ಆಸ್ತಿಗಳನ್ನು ವಿರೂಪಗೊಳಿಸುವ ಮತ್ತು ಪ್ರಚೋದನಾತ್ಮಕ ಹೇಳಿಕೆ ನೀಡುವ ಹೇಳಿಕೆಗಳ ವಿರುದ್ಧ ಕಾನೂನಿನಡಿ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಜಿ-20 ಶೃಂಗಸಭೆಯ ಹಿನ್ನೆಲೆ ಆಗಸ್ಟ್ 25 ರಿಂದ ಮೂರು ದಿನಗಳ ಅಧಿಕಾರಿಗಳ ಸಭೆ ನಡೆಯುತ್ತಿದ್ದು, ಭಾನುವಾರ ಮುಕ್ತಾಯವಾಗಲಿದೆ. ಸಭೆಗೆ 55 ದೇಶಗಳಿಂದ 1,500 ಪ್ರತಿನಿಧಿಗಳು ಆಗಮಿಸಿದ್ದಾರೆ. ಇಂತಹ ಗಣ್ಯ ಸಭೆಯ ಮಧ್ಯೆ ಖಲಿಸ್ತಾನಿಗಳು ದೇಶ ವಿರೋಧಿ ಚಟುವಟಿಕೆ ನಡೆಸಿದ್ದಾರೆ.
ಮುಂದಿನ ತಿಂಗಳು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ 18 ರಾಷ್ಟ್ರಗಳ ಮುಖ್ಯಸ್ಥರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜಿ20 ನಾಯಕರ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಚೀನಾದ ಪ್ರಧಾನಿ ಕ್ಸಿ ಜಿನ್‌ಪಿಂಗ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸೇರಿದಂತೆ ಹಲವು ರಾಷ್ಟ್ರಗಳ ಮುಖ್ಯಸ್ಥರು ಮತ್ತು ರಾಜತಾಂತ್ರಿಕ ಅಧಿಕಾರಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ 8 ತಿಂಗಳಲ್ಲಿ 73 ರೈತರ ಆತ್ಮಹತ್ಯೆ; 5 ವರ್ಷದಲ್ಲಿ ಸಾವಿನ ಹಾದಿ ಹಿಡಿದವರು 446 ಮಂದಿ!