ಲಖ್ನೋ(ಉತ್ತರಪ್ರದೇಶ):ಗ್ಯಾಂಗ್ಸ್ಟರ್, ರಾಜಕಾರಣಿಯಾಗಿದ್ದ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರನ್ನು ಕೊಲೆ ಮಾಡಿದ ಆರೋಪಿಗಳಾದ ಲವಲೇಶ್ ತಿವಾರಿ, ಸನ್ನಿ ಸಿಂಗ್ ಮತ್ತು ಅರುಣ್ ಮೌರ್ಯ ಎಂಬುವರನ್ನು ಬಂಧಿಸಲಾಗಿದೆ. ಅದರಲ್ಲಿ ಲವಲೇಶ್ ಎಂಬಾತ ನಿರುದ್ಯೋಗಿ, ಮಾದಕ ವ್ಯಸನಿಯಾಗಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ಈ ಬಗ್ಗೆ ಆತನ ಕುಟುಂಬಸ್ಥರೇ ಮಾಹಿತಿ ನೀಡಿದ್ದು, ಅತೀಕ್ ಕೊಲೆ ಆರೋಪಿ ಲವಲೇಶ್ ಹೇಗೆ ಅಲ್ಲಿಗೆ ಹೋದ ಎಂಬುದರ ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲ, ಅವನು ಮಾದಕ ವ್ಯಸನಿಯಾಗಿದ್ದು, ಅವನೊಂದಿಗೆ ನಮಗೆ ಯಾವುದೇ ಸಂಬಂಧ ಉಳಿದಿಲ್ಲ. ಕುಟುಂಬದೊಂದಿಗೆ ಆತ ವಾಸಿಸುತ್ತಿಲ್ಲ. ನಮ್ಮನ್ನು ತೊರೆದಿರುವ ಆತ ವಾರದ ಹಿಂದೆ ಮನೆಗೆ ಬಂದು ಭೇಟಿ ಮಾಡಿದ್ದ. ಈ ಹಿಂದೆ ಪ್ರಕರಣವೊಂದರಲ್ಲಿ ಲವಲೇಶ್ ಜೈಲು ಶಿಕ್ಷೆಗೆ ಗುರಿಯಾಗಿದ್ದ ಎಂಬುದನ್ನೂ ಆತನ ತಂದೆ ಬಹಿರಂಗಪಡಿಸಿದ್ದಾರೆ.
ಇನ್ನೊಬ್ಬ ಆರೋಪಿ ಸನ್ನಿ ಸಿಂಗ್ ಸಹೋದರ ಮಾತನಾಡಿ, ಗ್ಯಾಂಗ್ಸ್ಟರ್ ಅತೀಕ್ ಮತ್ತು ಅಶ್ರಫ್ರನ್ನು ಕೊಂದಿದ್ದು ತಮಗೆ ಮಾಹಿತಿ ಇಲ್ಲ. ಸನ್ನಿ ಸದ್ಯಕ್ಕೆ ನಿರುದ್ಯೋಗಿಯಾಗಿದ್ದು, ಏನೂ ಕೆಲಸವಿಲ್ಲದೇ ಅಲೆದಾಡುತ್ತಿದ್ದ. ಆತನ ಜೊತೆಗೆ ನಮಗೆ ಉತ್ತಮ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಿನ್ನೆ ಏನಾಯ್ತು?:ಪೊಲೀಸರು ಗ್ಯಾಂಗ್ಸ್ಟರ್ಗಳಾದ ಅತೀಕ್ ಅಹ್ಮದ್ ಮತ್ತು ಅಶ್ರಫ್ ಅವರನ್ನು ವೈದ್ಯಕೀಯ ಪರೀಕ್ಷೆಗೆಂದು ಆಸ್ಪತ್ರೆಗೆ ಕರೆ ತರುತ್ತಿದ್ದಾಗ ಪತ್ರಕರ್ತರ ವೇಷದಲ್ಲಿದ್ದ ಮೂವರು ಆರೋಪಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಅತೀಕ್ ತನ್ನ ಮಗನ ಶವಸಂಸ್ಕಾರಕ್ಕೆ ಏಕೆ ಹೋಗಲಿಲ್ಲ ಎಂದು ಪತ್ರಕರ್ತರೊಬ್ಬರು ಪ್ರಶ್ನೆ ಕೇಳುತ್ತಿದ್ದಾಗ ಹಿಂದಿನಿಂದ ಬಂದ ಆರೋಪಿ ತಲೆಗೆ ನೇರವಾಗಿ ಪಿಸ್ತೂಲು ಇಟ್ಟು ಗುಂಡು ಹಾರಿಸಿದ್ದಾನೆ. ಬಳಿಕ ಪಕ್ಕದಲ್ಲಿದ್ದ ಅಶ್ರಫ್ನ ಮೇಲೂ ಮೂವರು ಸೇರಿ ದಾಳಿ ಮಾಡಿದ್ದಾರೆ.