ಮುಂಬೈ(ಮಹಾರಾಷ್ಟ್ರ): ನೂತನ ರಾಷ್ಟ್ರಪತಿ ಆಯ್ಕೆಗೋಸ್ಕರ ನಡೆಯುವ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡುವುದಾಗಿ ಉದ್ಧವ್ ಠಾಕ್ರೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಗೆ ಮತ್ತಷ್ಟು ಬಲ ಬಂದಿದೆ. ಇದರ ಜೊತೆಗೆ ಶಿವಸೇನೆಯಲ್ಲಿ ಉಂಟಾಗಬಹುದಾಗಿದ್ದ ಮತ್ತೊಂದು ಬಂಡಾಯದ ಬೀಸಿ ಶಮನ ಮಾಡುವ ಕೆಲಸವನ್ನ ಮಾಜಿ ಮುಖ್ಯಮಂತ್ರಿ ಮಾಡಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ಘೋಷಣೆ ಮಾಡುವಂತೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮೇಲೆ ಶಿವಸೇನೆಯ ಸಂಸದರು ಒತ್ತಡ ಹೇರಿದ್ದರು. ನಿನ್ನೆ ನಡೆದ ಮಹತ್ವದ ಸಭೆಯಲ್ಲಿ ಬಹುತೇಕ ಸಂಸದರು ಎನ್ಡಿಎ ಅಭ್ಯರ್ಥಿಗೆ ಬೆಂಬಲ ಸೂಚಿಸಬೇಕು ಎಂಬ ಸಲಹೆ ನೀಡಿದ್ದರು.
ಇದರ ಬೆನ್ನಲ್ಲೇ ಉದ್ಧವ್ ಠಾಕ್ರೆ ಈ ನಿರ್ಧಾರ ಹೊರಹಾಕಿದ್ದಾರೆ. ಮಾತೋಶ್ರೀಯಲ್ಲಿ ನಿನ್ನೆ ನಡೆದ ಸಭೆಯಲ್ಲಿ ಶಿವಸೇನೆಯ 16 ಸಂಸದರು ಭಾಗಿಯಾಗಿದ್ದರು. ಇವರೆಲ್ಲರೂ ದ್ರೌಪದಿ ಮುರ್ಮುಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ ಎಂದು ಶಿವಸೇನೆಯ ಸಂಸದೆ ಗಜಾನನ ಕೀರ್ತಿಕರ್ ಹೇಳಿದ್ದರು. ಜೊತೆಗೆ ಮುಂದಿನ ಎರಡು ದಿನಗಳಲ್ಲಿ ಉದ್ಧವ್ ಠಾಕ್ರೆ ತಮ್ಮ ನಿರ್ಧಾರ ಹೊರಹಾಕಲಿದ್ದಾರೆ ಎಂದಿದ್ದರು. ಇದರ ಜೊತೆಗೆ ಶಿವಸೇನೆಯ ಸಂಸದರಿಗೆ ಪಕ್ಷ ತೊರೆಯದಂತೆ ಷರತ್ತು ವಿಧಿಸಲಾಗಿದೆ ಎಂದು ವರದಿಯಾಗಿದೆ.