ಮುಂಬೈ: ತಾನು ಮಹಿಳೆ ಎಂದು ಪೊಲೀಸ್ ನೇಮಕಾತಿಗೆ ಅರ್ಜಿ ಸಲ್ಲಿಸಿ, ನಂತರ ವೈದ್ಯಕೀಯ ಪರೀಕ್ಷೆಯ ಸಂದರ್ಭದಲ್ಲಿ ಪುರುಷನೆಂದು ಕಂಡು ಬಂದಿದ್ದ ವ್ಯಕ್ತಿಯನ್ನು ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಅಲ್ಲದ ಕಿರಿಯ ಟೈಪಿಸ್ಟ್ ಹುದ್ದೆಗೆ ನೇಮಕಾತಿ ಮಾಡುವ ಪ್ರಕ್ರಿಯೆಗಳನ್ನು ಮಹಾರಾಷ್ಟ್ರ ಸರ್ಕಾರ ಆರಂಭಿಸಿದೆ ಎಂದು ರಾಜ್ಯದ ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಹೈಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
2018ರಲ್ಲಿ ನಾಶಿಕ್ ಗ್ರಾಮೀಣ ಪೊಲೀಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಎಸ್ಸಿ ವರ್ಗದಿಂದ ಈ ಮಹಿಳೆ ಭಾಗವಹಿಸಿ, ನೇಮಕಾತಿಗೆ ಅರ್ಹತೆಯನ್ನೂ ಪಡೆದಿದ್ದರು. ಆದರೆ, ವೈದ್ಯಕೀಯವಾಗಿ ಇವಳು ಮಹಿಳೆಯಲ್ಲ ಪುರುಷ ಎಂದು ಕಂಡು ಬಂದಿತ್ತು. ನಂತರ ಇದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್‌ನ ಮೊರೆ ಹೋಗಿದ್ದರು. ಅವರ ನೇಮಕಾತಿಯನ್ನು ತ್ವರಿತವಾಗಿ ಮಾಡುವಂತೆ ಎರಡು ತಿಂಗಳ ಹಿಂದೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು.
ವೈದ್ಯಕೀಯ ಪರೀಕ್ಷೆಗಳ ಪ್ರಕಾರ ಆಕೆ ಮಹಿಳೆ ಅಲ್ಲ ಮತ್ತು ಪುರುಷರ ನೇಮಕಾತಿಯ ಕಟ್ ಆಫ್ ಅಂಕಗಳನ್ನು ಅವರು ಪಡೆದಿಲ್ಲವಾದ್ದರಿಂದ ಅವರನ್ನು ನೇಮಕ ಮಾಡಿಲ್ಲ ಎಂದು ಸರ್ಕಾರವು ಹೈಕೋರ್ಟ್ಗೆ ತಿಳಿಸಿತ್ತು.
19 ವರ್ಷದ ಮಹಿಳೆಯೊಬ್ಬರು ತಾನು ಪುರುಷ ಎಂದು ವೈದ್ಯಕೀಯ ವರದಿ ಬರುವವರೆಗೂ ಮಹಿಳೆಯಾಗಿಯೇ ಜೀವನ ನಡೆಸಿದ್ದರು ಎಂಬುದನ್ನು ನ್ಯಾಯಾಲಯ ಪರಿಗಣಿಸಿತ್ತು. ಪ್ರಕರಣದ ವಿಚಾರಣೆಯ ವೇಳೆ ಮಹಿಳೆಯು ಸಲ್ವಾರ್ ಕುರ್ತಾ ಮತ್ತು ದುಪ್ಪಟ್ಟಾ ಧರಿಸಿ ಹಾಜರಾಗಿದ್ದರು. ತನ್ನ ತಂದೆ-ತಾಯಿ ಕಬ್ಬು ಕಡಿಯುವ ಕೂಲಿ ಕೆಲಸ ಮಾಡುತ್ತಿದ್ದು, ಕುಟುಂಬ ನಿರ್ವಹಣೆಗಾಗಿ ಸ್ಥಿರ ಆದಾಯ ತನಗೆ ಬೇಕಿದೆ ಎಂದು ಆಕೆ ನ್ಯಾಯಾಲಯಕ್ಕೆ ಹೇಳಿದ್ದರು.
ಮಹಿಳೆಯನ್ನು ಕಾನ್ಸ್ಟೇಬಲ್ ಅಲ್ಲದ ಹುದ್ದೆಗೆ ನೇಮಕ ಮಾಡುವಂತೆ ರಾಜ್ಯದ ಗೃಹ ಸಚಿವಾಲಯವು ಎಡಿಜಿಪಿಗೆ ಪತ್ರ ಬರೆದಿದೆ ಎಂದು ಕುಂಭಕೋಣಿ ಅವರು, ನ್ಯಾಯಮೂರ್ತಿಗಳಾದ ರೇವತಿ ಮೊಹಿತೆ-ಡೇರೆ ಮತ್ತು ಶರ್ಮಿಳಾ ದೇಶಮುಖ ಅವರ ನ್ಯಾಯಪೀಠಕ್ಕೆ ತಿಳಿಸಿದರು.
ಅರ್ಜಿದಾರರ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಆಕೆಯನ್ನು ಕಿರಿಯ ಟೈಪಿಸ್ಟ್ ಹುದ್ದೆಗೆ ನೇಮಿಸಿಕೊಳ್ಳಲು ಸರ್ಕಾರ ನಿರ್ಧಾರ ಮಾಡಿದೆ. ಈ ನೇಮಕಾತಿ ಪ್ರಕರಣವು ಮುಂದೆ ಇನ್ನಾವುದೇ ನೇಮಕಾತಿಗಳಿಗೆ ಅನ್ವಯವಾಗದು ಎಂದೂ ಸರ್ಕಾರ ತಿಳಿಸಿದೆ.
ಇದನ್ನು ಓದಿ:10 ವರ್ಷಗಳಿಂದ ನಿರಂತರ ಲೈಂಗಿಕ ಕಿರುಕುಳ: 8 ಆರೋಪಿಗಳ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು