ಪಾಟ್ನಾ(ಬಿಹಾರ): ಭಾರತೀಯ ಜನತಾ ಪಾರ್ಟಿ ಬಿಟ್ಟು ಕಾಂಗ್ರೆಸ್ ಸೇರಿಕೊಂಡಿರುವ ನಟ ಕಮ್ ರಾಜಕಾರಣಿ ಶತ್ರುಘ್ನ ಸಿನ್ಹಾ ಮರಳಿ ಕಮಲ ಮುಡಿಯುತ್ತಾರೆಂಬ ಗುಸುಗುಸು ಶುರುವಾಗಿದೆ. ಇದಕ್ಕೆ ಪುಷ್ಠಿ ನೀಡಿದ್ದು, ಅವರ ಮಾಡಿರುವ ಟ್ವೀಟ್, 2019ರ ಲೋಕಸಭೆ ಚುನಾವಣೆಗೂ ಮೊದಲು ಭಾರತೀಯ ಜನತಾ ಪಾರ್ಟಿ ಬಿಟ್ಟು ಕಾಂಗ್ರೆಸ್ ಸೇರಿಕೊಂಡಿದ್ದ ಶತ್ರುಘ್ನ ಸಿನ್ಹಾ ಮೋದಿ ಗುಣಗಾನ ಮಾಡಿದ್ದಾರೆ.
ಸಿನ್ಹಾ ಮಾಡಿರುವ ಟ್ವೀಟ್
ಪ್ರಧಾನಿ ನರೇಂದ್ರ ಮೋದಿ ಹೊಗಳಿ ಶತ್ರುಘ್ನ ಸಿನ್ಹಾ ಟ್ವೀಟ್ ಮಾಡಿದ್ದು, ಜಗತ್ತಿನಲ್ಲಿ ನಾಲ್ಕು ರೀತಿಯ ಅತೃಪ್ತ ಜನರಿರುತ್ತಾರೆ 1. ತಮ್ಮ ದುಃಖದಿಂದ ಅತೃಪ್ತಿ. 2. ಇತರರ ದುಃಖದಿಂದ ಅತೃಪ್ತಿ. 3 ಇತರರ ಸಂತೋಷದಿಂದ ಅತೃಪ್ತಿ. 4. ಯಾವುದೇ ಕಾರಣವಿಲ್ಲದೇ ಅತೃಪ್ತಿ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮೇಲೆ ಕೆಲವರು ಬೇರೆ ಯಾವುದೇ ಕಾರಣವಿಲ್ಲದೇ ಅತೃಪ್ತಿ ಹೊಂದಿದ್ದಾರೆ. ಅವರ ಯೋಜನೆಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಎಂದಿದ್ದು, ಕಾಂಗ್ರೆಸ್ ಪಕ್ಷದ ವಿರುದ್ಧ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಹಾರಿ ಬಾಬು ಎಂದು ಗುರುತಿಸಿಕೊಳ್ಳಲು ಶತ್ರುಘ್ನ ಸಿನ್ಹಾ ಬಿಜೆಪಿಯ ಎಲ್ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಯಶವಂತ್ ಸಿನ್ಹಾ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಜತೆಗೆ ವಾಜಪೇಯಿ ಸರ್ಕಾರದ ವೇಳೆ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿರಿ: Telegram ಹೊಸ ಅಪ್ಡೇಟ್ : ಬಹುನಿರೀಕ್ಷಿತ ಗ್ರೂಪ್ ವಿಡಿಯೋ ಕಾಲ್ ಸೌಲಭ್ಯ
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತ ಜೊತೆ ಮಾತನಾಡಿರುವ ಬಿಹಾರ ಕಾಂಗ್ರೆಸ್ ಎಂಎಲ್ಸಿ ಪ್ರೇಮ್ ಚಂದ್ರ ಮಿಶ್ರಾ, ಶತ್ರುಘ್ನ ಸಿನ್ಹಾ ಪಕ್ಷದ ದೊಡ್ಡ ಮುಖಂಡರು. ಅವರು ಯಾವ ಕಾರಣಕ್ಕಾಗಿ ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆಂದು ನನಗೆ ಗೊತ್ತಿಲ್ಲ. ಅದಕ್ಕೆ ಉತ್ತರ ನೀಡಬೇಕಾಗಿರುವುದು ಸಿನ್ಹಾ ಅವರು. ಮೋದಿ ವಿರುದ್ಧ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರೀತಿಯ ವೈಯಕ್ತಿಕ ದ್ವೇಷವಿಲ್ಲ. ಆದರೆ, ಕೇಂದ್ರದಲ್ಲಿನ ಆಡಳಿತದ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.