ಹೈದರಾಬಾದ್: ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ, ಸಂಸತ್ತಿನಲ್ಲಿ ಚರ್ಚಿಸಲು ಎನ್‌ಸಿಪಿ ಕರೆದಿರುವ ವಿರೋಧ ಪಕ್ಷಗಳ ಸಭೆ ನವದೆಹಲಿಯ ಸಂಸತ್ತಿನ ಭವನದ ಅನೆಕ್ಸ್ ಎಕ್ಸ್ಟೆನ್ಶನ್ ಕೊಠಡಿಯಲ್ಲಿ ಈಗಾಗಲೇ ಆರಂಭಗೊಂಡಿದ್ದು, ಈ ಸಭೆಯ ನಂತರ ಸುದ್ದಿಗೋಷ್ಠಿ ನಡೆಯಲಿದೆ ಎಂದು ಎನ್‌ಸಿಪಿ ಹೇಳಿಕೆಯಲ್ಲಿ ತಿಳಿಸಿದೆ.
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಇಂದಿನ ಸಭೆಗೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಾಯಕ ಅಸಾದುದ್ದೀನ್ ಓವೈಸಿ ಅವರನ್ನು ಆಹ್ವಾನಿಸಿದ್ದಾರೆ. ಆಹ್ವಾನಿಸಿದ್ದಕ್ಕಾಗಿ ಧನ್ಯವಾದ ತಿಳಿಸಿರುವ ಓವೈಸಿ ಅವರು ತಾವು ಭಾಗವಹಿಸುವ ಬದಲಿಗೆ ಎಐಎಂಐಎಂ ನಾಯಕ ಔರಂಗಾಬಾದ್ ಸಂಸದ ಇಮ್ತಿಯಾಜ್ ಜಲೀಲ್ ಅವರನ್ನು ಸಭೆಗೆ ನಿಯೋಜಿಸಿದ್ದಾರೆ ಎಂದು ಎಐಎಂಐಎಂ ತಿಳಿಸಿದೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ಮಂಗಳವಾರ ಇಲ್ಲಿ ತನ್ನ ಸಂಸದೀಯ ಮಂಡಳಿ ಸಭೆ ನಡೆಸಲಿದ್ದು, ಜುಲೈ 18 ರಂದು ನಡೆಯಲಿರುವ ಚುನಾವಣೆಗೆ ತನ್ನ ಆಯ್ಕೆಯನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಚುನಾವಣಾ ಉಸ್ತುವಾರಿಗಾಗಿ ಬಿಜೆಪಿ ಈಗಾಗಲೇ 14 ಸದಸ್ಯರ ನಿರ್ವಹಣಾ ತಂಡವನ್ನು ರಚಿಸಿದೆ. ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಈ ತಂಡದ ಸಂಚಾಲಕರಾಗಿದ್ದಾರೆ.
ಈ ಹಿಂದೆ ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧ ಪಕ್ಷದ ಸಭೆ ಕರೆದಿದ್ದರು. ಇದರಲ್ಲಿ 17 ವಿರೋಧ ಪಕ್ಷಗಳ ನಾಯಕರು ಭಾಗವಹಿಸಿದ್ದರು. ಇಲ್ಲಿ, ಹಲವು ವಿರೋಧ ಪಕ್ಷಗಳ ನಾಯಕರು ಶರದ್ ಪವಾರ್ ಅವರನ್ನು ಜಂಟಿ ಅಭ್ಯರ್ಥಿಯಾಗುವಂತೆ ಒತ್ತಾಯಿಸಿದ್ದರು.
ಆದರೆ, ಹಿರಿಯ ಎನ್‌ಸಿಪಿ ನಾಯಕ ಈ ಪ್ರಸ್ತಾಪವನ್ನು ನಿರಾಕರಿಸಿದ್ದರು. ಬ್ಯಾನರ್ಜಿ ಅವರು ಶರದ್ ಪವಾರ್ ಜೊತೆಗೆ ಫಾರೂಕ್ ಅಬ್ದುಲ್ಲಾ ಮತ್ತು ಗೋಪಾಲಕೃಷ್ಣ ಗಾಂಧಿ ಅವರ ಹೆಸರುಗಳನ್ನು ಬ್ಯಾನರ್ಜಿ ಪ್ರಸ್ತಾಪಿಸಿದ್ದರು. ಆದರೆ, ಈ ಎರಡು ಹೆಸರುಗಳ ಬಗ್ಗೆ ಈ ಸಭೆಯಲ್ಲಿ ಯಾವುದೇ ಪಕ್ಷದ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿರಲಿಲ್ಲ. ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ವಿರೋಧ ಪಕ್ಷದ ನಾಯಕರ ಮನವಿಯನ್ನು ಅಬ್ದುಲ್ಲಾ ಅವರು ಕೂಡ ತಿರಸ್ಕರಿಸಿದ್ದರು.
ತೆಲಂಗಾಣದ ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ನಡೆದ ಸಭೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಭಾಗವಹಿಸಿರಲಿಲ್ಲ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಸಭೆಗೆ ಪ್ರತಿನಿಧಿಯನ್ನೂ ಕಳುಹಿಸಿರಲಿಲ್ಲ.
ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಿದ್ದು, ಟಿಎಂಸಿ, ಕಾಂಗ್ರೆಸ್ ಮತ್ತು ಎನ್‌ಸಿಪಿ ಹೊರತುಪಡಿಸಿ, ಸಿಪಿಐ, ಸಿಪಿಐ(ಎಂ), ಸಿಪಿಐಎಂಎಲ್, ಆರ್‌ಎಸ್‌ಪಿ, ಶಿವಸೇನೆ, ಆರ್‌ಜೆಡಿ, ಎಸ್‌ಪಿ, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಜೆಡಿ(ಎಸ್), ಡಿಎಂಕೆ, ಆರ್‌ಎಲ್‌ಡಿ, ಐಯುಎಂಎಲ್ ಮತ್ತು ಜೆಎಂಎಂ ಸೇರಿದಂತೆ ಪಕ್ಷಗಳು ಸಭೆಯಲ್ಲಿ ಭಾಗವಹಿಸಿದ್ದವು. ಈ ಮಧ್ಯೆ ಯಶ್ವಂತ ಸಿನ್ಹಾ ಪ್ರತಿಪಕ್ಷಗಳ ಜಂಟೀ ಅಭ್ಯರ್ಥಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸ್ವತಃ ಯಶ್ವಂತ್ ಸಿನ್ಹಾ ಟ್ವೀಟ್ ಮಾಡಿದ್ದಾರೆ.
ಸಭೆ ಬಳಿಕ ಇದು ಸ್ಪಷ್ಟವಾಗಲಿದೆ. ರಾಷ್ಟ್ರಪತಿ ಚುನಾವಣೆಗೆ ಜುಲೈ 18 ರಂದು ಮತದಾನ ನಡೆಯಲಿದ್ದು, ಜುಲೈ 21 ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ :ಮಹಾರಾಷ್ಟ್ರದಲ್ಲಿ ಕ್ಷಿಪ್ರ ಕ್ರಾಂತಿಯೇ?..11 ಶಾಸಕರ ಜೊತೆ ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ ನಾಪತ್ತೆ