ಮುಂಬೈ ( ಮಹಾರಾಷ್ಟ್ರ ) : ಮುಂಬೈ ಪೊಲೀಸರು ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ (Taarak Mehta Ka Ooltah Chashmah ) ಕಾರ್ಯಕ್ರಮದ ನಿರ್ಮಾಪಕ ಅಸಿತ್ ಮೋದಿ, ಈ ತಂಡದ ಸೊಹೈಲ್ ರಮಣಿ ಮತ್ತು ಕಾರ್ಯಕಾರಿ ನಿರ್ಮಾಪಕ ಜತಿನ್ ಬಜಾಜ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾರಕ್ ಮೆಹ್ತಾ ಕಾ ಊಲ್ಟಾ ಚಶ್ಮಾ ತಂಡದಲ್ಲೇ ಕೆಲಸ ಮಾಡುವ ಒಬ್ಬರು ಈ ಸಂಬಂಧ ದೂರು ಸಲ್ಲಿಸಿದ್ದು, ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 354 ಮತ್ತು 509 ರ ಅಡಿ ಸ್ಥಳೀಯ ಪೊವೈ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದೈಹಿಕವಾಗಿ ಸಹಕರಿಸುವಂತೆ ಬೇಡಿಕೆ ಇಟ್ಟ ಆರೋಪ :ಕಳೆದ ತಿಂಗಳು, ಜನಪ್ರಿಯ ನಟಿಯು ಅಸಿತ್ ಮೋದಿ, ಸೊಹೈಲ್ ರಮಣಿ ಮತ್ತು ಜತಿನ್ ಬಜಾಜ್ ವಿರುದ್ಧ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳಕ್ಕಾಗಿದ್ದೇನೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊವೈ ಪೊಲೀಸರು ನಟಿಯ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ. ಅಸಿತ್ ಮೋದಿ ಈ ಹಿಂದೆ ಹಲವು ಬಾರಿ ದೈಹಿಕವಾಗಿ ಸಹಕರಿಸುವಂತೆ ಬೇಡಿಕೆ ಇಟ್ಟಿದ್ದರು ಎಂದು ನೊಂದ ನಟಿ ಆರೋಪಿಸಿದ್ದಾರೆ.
ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದೆ : ಆರಂಭದಲ್ಲಿ, ನನ್ನ ಕೆಲಸವನ್ನು ಕಳೆದುಕೊಳ್ಳುವ ಭಯದಿಂದ ನಾನು ಅವರ ಎಲ್ಲ ಬೇಡಿಕೆಗಳನ್ನು ನಿರ್ಲಕ್ಷಿಸಿದೆ. ಯಾವುದಕ್ಕೂ ಪ್ರತಿಕ್ರಿಯೆ ಕೊಡಲಿಲ್ಲ. ಆದರೆ ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ ಎಂದು ನಟಿ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ನಿರ್ಮಾಪಕರ ಜೊತೆ ಕೆಲಸ ಮಾಡುತ್ತಿರುವ ನಟಿ ಮಾಡಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಪೊವೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.