ರೋಹ್ತಾಸ್( ಬಿಹಾರ):ಬಿಹಾರದ ರೋಹ್ತಾಸ್‌ನಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಜಿಲ್ಲೆಯ ಶಿವಸಾಗರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಈ ಘಟನೆ ನಡೆದಿದೆ. ಮೃತರೆಲ್ಲರೂ ಬಿಹಾರದ ಕೈಮೂರ್ ಜಿಲ್ಲೆಯ ಕುದರಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ.
ರಸ್ತೆ ಬದಿಯಲ್ಲಿ ನಿಂತಿದ್ದ ಕಂಟೈನರ್ಗೆ ವೇಗವಾಗಿ ಬಂದ ಸ್ಕಾರ್ಪಿಯೋ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರಲ್ಲಿ ಐವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತ ನಡೆದಾಗ ಸಂತ್ರಸ್ತರ ವಾಹನದಲ್ಲಿ ಒಟ್ಟು 12 ಮಂದಿ ಇದ್ದರು. ಇವರೆಲ್ಲರೂ ಕೈಮೂರ್ ಜಿಲ್ಲೆಯ ಸವಾರ ಪೊಲೀಸ್ ಠಾಣೆ ವ್ಯಾಪ್ತಿಯ ಕುದರಿ ಗ್ರಾಮದ ನಿವಾಸಿಗಳು. ಮುಂಜಾನೆ 3 ಗಂಟೆ ಸುಮಾರಿಗೆ ರೋಹ್ತಾಸ್‌ನ ಶಿವಸಾಗರ್ ಪ್ರದೇಶದ ಪಖ್ನಾರಿ ತಲುಪಿದ ತಕ್ಷಣ, ವಾಹನ ಚಾಲಕನ ನಿಯಂತ್ರಣ ತಪ್ಪಿದೆ. ಅತಿ ವೇಗದಲ್ಲಿದ್ದ ಕಾರಣ ವಾಹನ ನೇರವಾಗಿ ಹೋಗಿ ರಸ್ತೆ ಬದಿ ನಿಂತಿದ್ದ ಕಂಟೈನರ್ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ನಂತರ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆಯ ಮಾಹಿತಿ ಪಡೆದ ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಗಾಯಾಳುಗಳನ್ನು ಸಮೀಪದ ಸದರ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಭೀಕರ ಘಟನೆ ಕುರಿತು ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೃತರ ಗುರುತುಗಳನ್ನು ಪೊಲೀಸರು ದೃಢಪಡಿಸುತ್ತಿದ್ದಾರೆ. ಅಪಘಾತದ ಬಗ್ಗೆ ಮೃತರ ಕುಟುಂಬ ಸದಸ್ಯರು ಮತ್ತು ಸಂಬಂಧಿಕರಿಗೆ ಮಾಹಿತಿ ರವಾನಿಸಲಾಗಿದೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ರಾಮನಗರ: ಕೆಎಸ್ಆರ್ಟಿಸಿ ಬಸ್-ಕಾರು ನಡುವೆ ಭೀಕರ ರಸ್ತೆ ಅಪಘಾತ, 6 ಮಂದಿ ಸಾವು
ಜಾರ್ಖಂಡ್ನಲ್ಲಿ ಮೂವರ ದಾರುಣ ಸಾವು:ನಿಯಂತ್ರಣ ಕಳೆದುಕೊಂಡ ಕಾರು 12 ಕ್ಕೂ ಹೆಚ್ಚು ಜನರಿಗೆ ಡಿಕ್ಕಿಯಾಗಿದ್ದು, ಅದರಲ್ಲಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದರು. ಹಲವು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಾರ್ಖಂಡ್ನ ಪಲಾಮು ಜಿಲ್ಲೆಯಲ್ಲಿ ಮಂಗಳವಾರ(ಆ.29) ರಂದು ಈ ಘಟನೆ ನಡೆದಿತ್ತು. ಗಧ್ವಾದಿಂದ ದಾಲ್ತೋಂಗಂಜ್ ಕಡೆಗೆ ಗಧ್ವಾ ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡಿತ್ತು. ಇದರಿಂದ ರಸ್ತೆಯ ಪಕ್ಕದಲ್ಲಿ ಹಾದು ಹೋಗಿದ್ದು, ಎದುರಿಗೆ ಬಂದ ಜನರನ್ನು ಗುದ್ದಿಕೊಂಡು ಸಾಗಿದೆ. ಇದರಿಂದ ಭೀಕರ ಅನಾಹುತ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದರು. ಅನಾಹುತದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿತ್ತು.
ಇದನ್ನೂ ಓದಿ:ನಿಯಂತ್ರಣ ಕಳೆದುಕೊಂಡು ಎದುರಿಗೆ ಬಂದವರಿಗೆ ಗುದ್ದಿದ ಕಾರು: ಜಾರ್ಖಂಡ್ನಲ್ಲಿ ಮೂವರ ದಾರುಣ ಸಾವು