ಭೋಪಾಲ್ (ಮಧ್ಯಪ್ರದೇಶ): ಕಾರೊಂದು ನೀರಿಲ್ಲದ ಬಾವಿಗೆ ಬಿದ್ದು ಮೂರು ವರ್ಷದ ಮಗು ಸೇರಿ ಏಳು ಜನರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಚಿಂದ್ವಾರಾ ಜಿಲ್ಲೆಯಲ್ಲಿ ನಡೆದಿದೆ. ದುರ್ಘಟನೆಯಲ್ಲಿ ಇನ್ನೂ ಮೂವರು ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರೆಲ್ಲರೂ ಲೆಂಡಗೆಂಡಿ ಗ್ರಾಮದ ನಿವಾಸಿಗಳು. ಇವರು ಬುಧವಾರ ಸಂಜೆ ಮದುವೆ ಸಮಾರಂಭದಿಂದ ಹಿಂತಿರುಗುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದ ಬಾವಿಗೆ ಕಾರು ಬಿದ್ದಿದೆ.
ದುರಂತದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳೀಯ ರೈತರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಂಟೆಗಳ ಪ್ರಯತ್ನದ ನಂತರ ಎಲ್ಲ ಏಳು ಜನರ ಮೃತದೇಹಗಳನ್ನು ಬಾವಿಯಿಂದ ಹೊರತೆಗೆಯಲಾಗಿದೆ. ಮೃತರನ್ನು ದೀಪೇಂದ್ರ ಇವ್ನಾಟಿ (3), ಅಜಯ್ (32), ರಂಜೀತ್ (35), ಸಚಿನ್ (19), ರಾಜ್‌ಕುಮಾರ್ (40), ಶಿವಪಾಲ್ (31) ಹಾಗೂ ರಾಮನಾಥ್ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಬೈಕ್ ಸವಾರ ಮತ್ತು ಕಾರಿನಲ್ಲಿದ್ದ ಮತ್ತಿಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:14 ವರ್ಷದ ಬಾಲಕನಿಗೆ ಬೆಂಕಿ ಹಚ್ಚಿದ್ದ 7 ವರ್ಷದ ಬಾಲಕ: ತಿಂಗಳ ಬಳಿಕ ಗಾಯಾಳು ಸಾವು