ನವದೆಹಲಿ: ಮಹಾರಾಷ್ಟ್ರದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಏಳು ಜನರನ್ನು ಬಂಧಿಸಿ, ಸುಮಾರು 32 ಕೋಟಿ ರೂಪಾಯಿ ಮೌಲ್ಯದ 61 ಕೆಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಶುಕ್ರವಾರ ಒಂದೇ ದಿನ ಎರಡು ಪ್ರತ್ಯೇಕ ಪ್ರಕರಣಗಳು ನಡೆದಿದ್ದು, ಮುಂಬೈ ಏರ್‌ಪೋರ್ಟ್ ಕಸ್ಟಮ್ಸ್‌ನ ಇತಿಹಾಸದಲ್ಲೇ ಒಂದೇ ದಿನದಲ್ಲಿ ನಡೆದ ಅತಿ ದೊಡ್ಡ ಜಪ್ತಿ ಕಾರ್ಯ ಇದಾಗಿದೆ. ಮೊದಲ ಪ್ರಕರಣದಲ್ಲಿ ತಾಂಜೆನಿಯಾದಿಂದ ಬಂದಿಳಿದ ಭಾರತದ ರಾಷ್ಟ್ರೀಯತೆ ಹೊಂದಿದ ನಾಲ್ವರು ಪ್ರಯಾಣಿಕರನ್ನು ತಪಾಸಣೆ ನಡೆಸಲಾಗಿದೆ. ಈ ವೇಳೆ ಕಳ್ಳಸಾಗಣೆ ಮಾಡಿದ ಚಿನ್ನದ ಬಿಸ್ಕಟ್ಗಳನ್ನು ತಲಾ 1 ಕೆಜಿಯಂತೆ ಬಹು ಪಾಕೆಟ್‌ಗಳೊಂದಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಸೊಂಟದ ಬೆಲ್ಟ್‌ಗಳಲ್ಲಿ ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ.
ಈ ನಾಲ್ವರು ಪ್ರಯಾಣಿಕರಿಂದ 28.17 ಕೋಟಿ ಮೌಲ್ಯದ ಒಟ್ಟು 53 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರತಿಯೊಬ್ಬರಲ್ಲಿ ಕ್ರಮವಾಗಿ 12, 13, 14 ಮತ್ತು 14 ಕೆಜಿ ಚಿನ್ನ ದೊರೆತಿದೆ. ಯುಎಇಯಿಂದ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬೆಲ್ಟ್‌ಗಳ ಒಳಗೆ ಬಚ್ಚಿಟ್ಟಿದ್ದ ಚಿನ್ನದ ಬಿಸ್ಕಟ್ಗಳನ್ನು ಸುಡಾನ್ ಪ್ರಜೆಯೊಬ್ಬರು ದೋಹಾ ವಿಮಾನ ನಿಲ್ದಾಣದಲ್ಲಿ ಈ ನಾಲ್ವರಿಗೆ ಹಸ್ತಾಂತರಿಸಿದ್ದಾರೆ. ಸದ್ಯ ಎಲ್ಲ ನಾಲ್ವರು ಪ್ರಯಾಣಿಕರನ್ನು ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.