ನವದೆಹಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಮತ ಎಣಿಕೆ ಜೊತೆಗೆ ಒಂದು ಲೋಕಸಭಾ ಕ್ಷೇತ್ರ ಹಾಗೂ ಆರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಕೂಡ ಇಂದು ನಡೆಯುತ್ತಿದೆ. ವಿವಿಧ ಕಾರಣಗಳಿಂದ ತೆರವಾಗಿದ್ದ ಆರು ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಒಂದು ಲೋಕಸಭಾ ಕ್ಷೇತ್ರಕ್ಕೆ ಡಿ.5ರಂದು ಚುನಾವಣೆ ನಡೆದಿತ್ತು. ವಿವಿಧ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದು, ಫಲಿತಾಂಶಕ್ಕೆ ಎದರು ನೋಡುತ್ತಿದ್ದಾರೆ.
ಎಲ್ಲೆಲ್ಲಿ ಉಪ ಚುನಾವಣೆ:ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರ ಮತ್ತು ರಾಂಪುರ್, ಖತೌಲಿ, ಒಡಿಶಾದ ಪದಾಂಪುರ್, ರಾಜಸ್ಥಾನದ ಸರ್ದರ್ಶಹರ್, ಬಿಹಾರದ ಕುಧಾನಿ ಮತ್ತು ಛತ್ತೀಸ್‌ಗಢದ ಭಾನುಪ್ರತಾಪುರ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಉತ್ತರ ಪ್ರದೇಶದ ಮೂರು ಕ್ಷೇತ್ರಗಳ ಮೇಲೆ ಎಲ್ಲ ಪಕ್ಷಗಳ ಕಣ್ಣು ನೆಟ್ಟಿದ್ದು, ಅದರಲ್ಲೂ ಬಿಜೆಪಿ ಹಾಗೂ ಸಮಾಜವಾದಿ ಪಕ್ಷ ಈ ಸ್ಥಾನಗಳನ್ನು ಗೆಲ್ಲುವುದು ತಮ್ಮ ಪ್ರತಿಷ್ಠೆಯ ಯುದ್ಧವಾಗಿ ಪರಿಗಣಿಸಿದೆ.
ಮೈನ್‌ಪುರಿ ಕ್ಷೇತ್ರಕ್ಕೆ ಉಪಚುನಾವಣೆ:ಅಕ್ಟೋಬರ್‌ನಲ್ಲಿ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ನಿಧನದಿಂದಾಗಿ ಖಾಲಿಯಾಗಿದ್ದ ಮೈನ್‌ಪುರಿ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದೆ. ಎಸ್‌ಪಿ ನಾಯಕ ಅಜಂ ಖಾನ್ ಅವರನ್ನು ಅನರ್ಹಗೊಳಿಸಿದ್ದರಿಂದ ರಾಂಪುರ ಸದರ್ ಸ್ಥಾನ ತೆರವಾಗಿತ್ತು. ಮುಲಾಯಂ ಸಿಂಗ್ ಯಾದವ್ ಅವರ ಹಿರಿಯ ಸೊಸೆ ಮತ್ತು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರು ಮೈನ್‌ಪುರಿಯಿಂದ ಸ್ಪರ್ಧಿಸಿದ್ದು, ಮುಲಾಯಂ ಅವರ ಸಹೋದರ ಶಿವಪಾಲ್ ಸಿಂಗ್ ಯಾದವ್ ಅವರ ಮಾಜಿ ವಿಶ್ವಾಸಿ ರಘುರಾಜ್ ಸಿಂಗ್ ಶಾಕ್ಯಾ ಇದೇ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ.
ಇದೇ 2013ರ ಮುಜಾಫರ್‌ನಗರ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕಳೆದ ತಿಂಗಳು ಬಿಜೆಪಿ ಶಾಸಕ ವಿಕ್ರಮ್ ಸಿಂಗ್ ದೋಷಿ ಎಂದು ಜಿಲ್ಲಾ ನ್ಯಾಯಾಲಯ ಘೋಷಣೆ ಮಾಡಿದ ಬೆನ್ನಲ್ಲಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಅವರಿಂದ ತೆರವಾಗಿ ಖತೌಲಿಯಲ್ಲಿ ಬಿಜೆಪಿ ಅವರ ಪತ್ನಿ ರಾಜಕುಮಾರಿ ಸೈನಿ ಅವರನ್ನು ಕಣಕ್ಕಿಳಿಸಿದೆ. ರಾಷ್ಟ್ರೀಯ ಲೋಕದಳದಿಂದ ಮದನ್ ಭಯ್ಯಾ ಅವರು ಕಣಕ್ಕಿಳಿದಿದ್ದಾರೆ.