ರಾಂಚಿ(ಜಾರ್ಖಂಡ್):ದೇಶಾದ್ಯಂತ ಅಪಾರಾಧ ಪ್ರಕರಣಗಳು ಭಾರಿ ಸದ್ದು ಮಾಡುತ್ತಿವೆ. ಇದೀಗ ಜಾರ್ಖಂಡ್ನರಾಂಚಿಯ ಹಜಾರಿಬಾಗ್ನಲ್ಲಿ ಮಾನವಕುಲ ತಲೆತಗ್ಗಿಸುವ ಘಟನೆಯೊಂದು ನಡೆದಿದೆ. ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯ ಮೇಲೆ ದುಷ್ಕರ್ಮಿಗಳು ಎರಗಿದ್ದು, ಅತ್ಯಾಚಾರ ಯತ್ನಿಸಿದ್ದಾರೆ. ಇದಕ್ಕೆ ವಿರೋಧಿಸಿದ್ದಕ್ಕೆ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಜೀವ ದಹನಕ್ಕೆ ಯತ್ನಿಸಿದ ಘಟನೆ ನಡೆದಿದೆ. ಮಹಿಳೆ ತೀವ್ರ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿವರ:ಹಜಾರಿಬಾಗ್ ನಿವಾಸಿಯಾದ ಸಂತ್ರಸ್ತ ಮಹಿಳೆ ಮನೆಯಲ್ಲಿ ಒಂಟಿಯಾಗಿದ್ದಾಗ ನಾಲ್ಕು ದುಷ್ಕರ್ಮಿಗಳು ಮನೆಗೆ ನುಗ್ಗಿದ್ದಾರೆ. ಈ ವೇಳೆ ಆಕೆಯ ಜೊತೆಗೆ ಅನುಚಿತವಾಗಿ ವರ್ತಿಸಿದ ಈ ಕಿಡಿಗೇಡಿಗಳು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದುರುಳರ ಕೃತ್ಯಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಕುಪಿತರಾದ ದುಷ್ಕರ್ಮಿಗಳು ಮಹಿಳೆಯನ್ನು ಬಲವಂತವಾಗಿ ಮಂಚಕ್ಕೆ ಕಟ್ಟಿ ಹಾಕಿ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಬೆಂಕಿಯಲ್ಲಿ ಬೇಯುತ್ತಿದ್ದ ಮಹಿಳೆ ಜೋರಾಗಿ ಕಿರುಚಾಡಿಕೊಂಡಿದ್ದಾಳೆ. ಇದನ್ನು ಕೇಳಿಸಿಕೊಂಡು ನೆರೆಹೊರೆಯವರು ಸ್ಥಳಕ್ಕೆ ದೌಡಾಯಿಸಿ ಬಂದಿದ್ದಾರೆ. ತಕ್ಷಣವೇ ಬೆಂಕಿಯನ್ನು ನಂದಿಸಿ, ಮಹಿಳೆಯನ್ನು ಹಜಾರಿಬಾಹ್ ವೈದ್ಯಕೀಯ ಕಾಲೇಜಿಗೆ ರವಾನಿಸಿದ್ದಾರೆ. ಮಹಿಳೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ಹಾಗೂ ತೀವ್ರ ಸುಟ್ಟ ಗಾಯಗಳಿಂದ ನರಳಾಡುತ್ತಿದ್ದ ಕಾರಣ ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ದುರುಳ ಕೃತ್ಯದಿಂದ ಸುಟ್ಟ ಗಾಯಗಳಿಂದ ಬಳಲುತ್ತಿರುವ ಅವರಿಗೆ ಅಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ.
ವೈದ್ಯರು ನೀಡಿರುವ ಮಾಹಿತಿಯ ಪ್ರಕಾರ, ಮಹಿಳೆಯ ಕೈಗಳು, ದೇಹದ ಇತರ ಭಾಗಗಳು ಶೇಕಡಾ 60 ರಿಂದ 65 ರಷ್ಟು ಸುಟ್ಟು ಹೋಗಿವೆ ಎಂದು ತಿಳಿಸಿದ್ದಾರೆ. 3 ವರ್ಷಗಳ ಹಿಂದಯಷ್ಟೇ ಮಹಿಳೆಗೆ ವಿವಾಹವಾಗಿತ್ತು. ಘಟನೆಯ ಬಳಿಕ ಎಲ್ಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಸಂತ್ರಸ್ತೆಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆಯೂ ನಡೆದಿತ್ತು ಇಂತಹುದ್ದೇ ಘಟನೆ:ವಿಚಿತ್ರ ಸಂಗತಿಯೆಂದರೆ, ಜಾರ್ಖಂಡ್‌ನಲ್ಲಿ ಮಹಿಳೆಯೊಬ್ಬರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ ಇದೇ ಮೊದಲೇನು ಅಲ್ಲ. ಈ ಹಿಂದೆಯೂ ದುಮ್ಕಾದಲ್ಲಿ ಇಂತಹ ಘಟನೆಯೊಂದು ನಡೆದಿತ್ತು. ಕಳೆದ ಆಗಸ್ಟ್ನಲ್ಲಿ ಯುವಕನೊಬ್ಬ, ಯುವತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಘಟನೆಯಲ್ಲಿ ಯುವತಿ ಗಂಭೀರವಾಗಿ ಗಾಯಗೊಂಡಿದ್ದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಆ ಯುವತಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದರು.
ದುಮ್ಕಾದಲ್ಲೇ ನಡೆದ ಇನ್ನೊಂದು ಘಟನೆಯಲ್ಲಿ ಪತಿಯೇ ಪತ್ನಿಯ ಮೇಲೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದ. ಕೌಟುಂಬಿಕ ಕಲಹದ ವೇಳೆ ಪತಿ, ಪತ್ನಿಯನ್ನು ಪೆಟ್ರೋಲ್ ಸುರಿದು ಸುಡುವುದಾಗಿ ಬೆದರಿಕೆ ಹಾಕಿದ್ದ. ಜಗಳದ ವೇಳೆ ಪಕ್ಕದಲ್ಲೇ ಉರಿಯುತ್ತಿದ್ದ ಅಗ್ಗಿಷ್ಟಿಕೆ ಮೇಲೆ ಪೆಟ್ರೋಲ್ ಬಿದ್ದ ಕಾರಣ ಮಹಿಳೆಗೆ ಬೆಂಕಿ ಹೊತ್ತಿಕೊಂಡಿತ್ತು. ಇದರಿಂದ ಮಹಿಳೆ ಆ ಅಗ್ಗಷ್ಟಿಕೆಯಲ್ಲಿ ಬೆಂದು ಹೋಗಿದ್ದಳು. ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ
ಓದಿ:ಯೂಟ್ಯೂಬ್ನಿಂದ ಕೋಡಿಂಗ್ ಕಲಿತ ಯುವತಿ: ಗೂಗಲ್ನಲ್ಲಿ ಸಿಕ್ತು 60 ಲಕ್ಷದ ಭರ್ಜರಿ ಪ್ಯಾಕೇಜ್!