ನವದೆಹಲಿ/ನೋಯ್ಡಾ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ಕುರಿತಾಗಿ ಸುಳ್ಳು ಮಾಹಿತಿ ಪ್ರಸಾರ ಮಾಡಿದ ಆರೋಪದ ಪ್ರಕರಣದಲ್ಲಿ ಖಾಸಗಿ ನ್ಯೂಸ್ ಚಾನೆಲ್ನ ಆ್ಯಂಕರ್ ರೋಹಿತ್ ರಂಜನ್ ಅವರನ್ನು ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ರಾಹುಲ್ ಗಾಂಧಿ ಕೇರಳದ ವಯನಾಡ್ನಲ್ಲಿ ತಮ್ಮ ಕಚೇರಿ ಮೇಲೆ ಎಸ್ಎಫ್ಐ ಕಾರ್ಯಕರ್ತರು ಮಾಡಿದ ದಾಳಿ ಕುರಿತಾಗಿ ಮಾತನಾಡಿದ್ದರು. ಆದರೆ, ಈ ಹೇಳಿಕೆಯ ವಿಡಿಯೋ ಉದಯಪುರದಲ್ಲಿ ನಡೆದ ಕನ್ಹಯ್ಯಾ ಲಾಲ್ ಹತ್ಯೆ ಬಗ್ಗೆ ಮಾತನಾಡಿದಂತೆ ಬಿಂಬಿಸಿ ರೋಹಿತ್ ರಂಜನ್ ನಿರೂಪಣೆ ಮಾಡುತ್ತಿದ್ದ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಗಿತ್ತು. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಗಾಜಿಯಾಬಾದ್ನಲ್ಲಿರುವ ಚಾನೆಲ್ನ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದರು. ನಂತರ ಈ ತಪ್ಪಿನ ಬಗ್ಗೆ ಚಾನೆಲ್ ಕ್ಷಮೆಯಾಚಿಸಿತ್ತು.
ನ್ಯೂಸ್ ಚಾನೆಲ್ನ ಆ್ಯಂಕರ್ ರೋಹಿತ್ ರಂಜನ್ ಅರೆಸ್ಟ್ ಪೊಲೀಸರ ನಡುವೆ ಜಿಜ್ಞಾಸೆ:ರಾಹುಲ್ ಹೇಳಿಕೆಯನ್ನು ತಪ್ಪಾಗಿ ಪ್ರಸಾರ ಮಾಡಿರುವ ಬಗ್ಗೆ ರೋಹಿತ್ ರಂಜನ್ ಅವರನ್ನು ಬಂಧಿಸಲೆಂದು ಛತ್ತೀಸ್ಗಢ ಪೊಲೀಸರು ಗಾಜಿಯಾಬಾದ್ಗೆ ಬಂದಿದ್ದರು. ಆದರೆ, ಬಂಧನದ ಬಗ್ಗೆ ಛತ್ತೀಸ್ಗಢ ಪೊಲೀಸರು ಯಾವುದೇ ವಾರಂಟ್ ನೀಡಲಿಲ್ಲ ಎಂದು ರಂಜನ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗಾಜಿಯಾಬಾದ್ ಎಸ್ಎಸ್ಪಿ ಮತ್ತು ಲಖನೌ ಎಡಿಜಿ ಅವರಿಗೆ ಟ್ವೀಟ್ ಮಾಡಿ ಅವರಿಂದ ಸಹಾಯ ಕೋರಿದ್ದಾರೆ.
ಆಗ ಸ್ಥಳಕ್ಕೆ ಗಾಜಿಯಾಬಾದ್ ಪೊಲೀಸರು ಬಂದಿದ್ದಾರೆ. ಈ ವೇಳೆ ತಮಗೆ ಮಾಹಿತಿ ಇಲ್ಲದೇ ಛತ್ತೀಸ್ಗಢ ಪೊಲೀಸರು ರಂಜನ್ ಅವರನ್ನು ಬಂಧಿಸಲು ಬಂದಿರುವುದು ಹೇಗೆ ಪ್ರಶ್ನಿಸಿದರು. ಇದಕ್ಕೆ ಛತ್ತೀಸ್ಗಢ ಪೊಲೀಸರು ನಾವು ಅವರ ಬಂಧನಕ್ಕೆ ವಾರಂಟ್ ಹೊಂದಿರುವುದಾಗಿ ತಿಳಿಸಿದರು. ಇದರಿಂದ ಎರಡೂ ಕಡೆಯ ಪೊಲೀಸರು ನಡುವೆ ಕೆಲ ಹೊತ್ತು ವಾಗ್ವಾದ ನಡೆಯಿತು. ಈ ನಡುವೆ ಕೊನೆಗೆ ನೋಯ್ಡಾ ಪೊಲೀಸರು ರೋಹಿತ್ ರಂಜನ್ ಬಂಧಿಸಿ ಕರೆದೊಯ್ದರು.
ಇದನ್ನೂ ಓದಿ:ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ ಬರ್ಬರ ಕೊಲೆ!