ನವದೆಹಲಿ:ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆ ಇಲ್ಲದೆ ಕೋವಿಡ್ ರೋಗಿಗಳು ಸಾವನ್ನಪ್ಪುತ್ತಿದ್ದು, ಕೇಂದ್ರ ಸರ್ಕಾರ ಹಾಗೂ ಖಾಸಗಿ ಕೈಗಾರಿಕಾ ವಲಯದ ಕಾರ್ಯವೈಖರಿ ಬಗ್ಗೆ ದೆಹಲಿ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
'ಮ್ಯಾಕ್ಸ್' ಹೆಸರಿನಲ್ಲಿ ವಿವಿಧ ಆಸ್ಪತ್ರೆಗಳನ್ನು ಹೊಂದಿರುವ ಬಾಲಾಜಿ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರವು ಆಮ್ಲಜನಕ ಕೊರತೆ ಕುರಿತು ಸಲ್ಲಿಸಿದ ಅರ್ಜಿಯ ತುರ್ತು ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನಡೆಸಿತು. ಈ ವೇಳೆ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದೆ.
ಸೋಂಕಿಗೆ ಒಳಗಾಗಿ ಜನರು ಚಿಂತಾಜನಕ ಸ್ಥಿತಿಯಲ್ಲಿದ್ದರೂ ಖಾಸಗಿ ಕಾರ್ಖಾನೆಗಳ ಮೂಲಕ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರ ಆಮ್ಲಜನಕ ಪೂರೈಕೆ ಮಾಡದಿರುವುದನ್ನು ಗಮನಿಸಿದರೆ 'ಕೇಂದ್ರ ಸರ್ಕಾರಕ್ಕೆ ಮನುಷ್ಯ ಜೀವನ ಮುಖ್ಯವಲ್ಲ ಎನ್ನುವಂತೆ ತೋರುತ್ತಿದೆ' ಎಂದು ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ರೇಖಾ ಪಲ್ಲಿ ಅವರ ನ್ಯಾಯಪೀಠವು ತೀವ್ರ ಕಳವಳ ವ್ಯಕ್ತಪಡಿಸಿತು.