ನವದೆಹಲಿ :ಪ್ರಧಾನಿಗೆ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆದಿದೆ. ಪ್ರಧಾನಿ ಮೋದಿಯವರು ಜನವರಿ 5ರಂದು ಪಂಜಾಬ್ ರಾಜ್ಯದಲ್ಲಿ ಓಡಾಡಿದ ಎಲ್ಲಾ ಸ್ಥಳಗಳ ದಾಖಲೆ ಮತ್ತು ಪ್ರಧಾನಿ ಓಡಾಡಲು ಇದ್ದ ಸೌಕರ್ಯಗಳ ದಾಖಲೆಗಳನ್ನು ಸಂಗ್ರಹಿಸುವಂತೆ ಪಂಜಾಬ್ ಹೈಕೋರ್ಟ್ನ ಉನ್ನತ ಅಧಿಕಾರಿಯೊಬ್ಬರಿಗೆ ಸೂಚನೆ ನೀಡಿದೆ.
ಇದರೊಂದಿಗೆ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭದ್ರತಾ ಲೋಪ ಕುರಿತಂತೆ ತನಿಖಾ ಸಮಿತಿಗಳನ್ನು ರಚನೆ ಮಾಡಿವೆ. ಈ ಸಮಿತಿಗಳು ಸೋಮವಾರದವರೆಗೆ ತಮ್ಮ ತನಿಖೆಯನ್ನ ಸ್ಥಗಿತಗೊಳಿಸಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರ ತ್ರಿಸದಸ್ಯ ಪೀಠವು ಪ್ರಧಾನಿ ಭೇಟಿಯ ವೇಳೆಯಲ್ಲಾದ ಭದ್ರತಾ ಲೋಪದ ಸಾಕ್ಷ್ಯಗಳನ್ನು ಸಂರಕ್ಷಿಸಲು ಮತ್ತು ತಪ್ಪು ಮಾಡಿದ ಪಂಜಾಬ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ, ಈ ಆದೇಶ ನೀಡಿವೆ.
ಈ ಘಟನೆಯನ್ನು ಅಪರೂಪದಲ್ಲಿ ಅಪರೂಪ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಟೀಕಿಸಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರವನ್ನು ಈ ಘಟನೆ ಉಂಟು ಮಾಡಿದೆ ಎಂದು ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದ್ದಾರೆ.