ನವದೆಹಲಿ:ಕಲಾಪ ನಡೆಯುತ್ತಿರುವ ವೇಳೆಯೇ ಸಂಸತ್ ಭವನದೊಳಕ್ಕೆ ನುಗ್ಗಿ ಭದ್ರತಾ ಲೋಪ ಎಸಗಿದ ಮುಖ್ಯ ಆರೋಪಿ ಲಲಿತ್ ಝಾ, ಸಾಮಾಜಿಕ ಮಾಧ್ಯಮಗಳಲ್ಲಿ ಆತಂಕ ಉಂಟು ಮಾಡುವ, ಪ್ರಚೋದನಕಾರಿ ಪೋಸ್ಟ್ಗಳನ್ನು ಹಂಚಿಕೊಂಡಿರುವುದು ತನಿಖೆಯಲ್ಲಿ ಬಯಲಾಗಿದೆ.
ಅಕ್ಟೋಬರ್ 26 ರಂದು 'ಭಾರತಕ್ಕೆ ಇಂದು ಬೇಕಾಗಿರುವುದು ಬಾಂಬ್ಗಳು' ಎಂಬ ಪೋಸ್ಟ್ ಅನ್ನು ಈತ ಹಂಚಿಕೊಂಡಿದ್ದಾನೆ. ಇಂತಹ ಅನೇಕ ಪ್ರಚೋದನಕಾರಿ ಹೇಳಿಕೆಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪಸರಿಸಿದ ಬಗ್ಗೆ ಇನ್ನಷ್ಟು ತನಿಖೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸ್ ವಿಶೇಷ ತನಿಖಾ ದಳ ತಿಳಿಸಿದೆ.
ದೇಶದಲ್ಲಿ ಇಂದು ನಡೆಯುತ್ತಿರುವ ದಬ್ಬಾಳಿಕೆ, ಅನ್ಯಾಯ ಮತ್ತು ಅರಾಜಕತೆ ವಿರುದ್ಧ ಬಲವಾದ ಧ್ವನಿ ಎತ್ತಲು ಪ್ರಮುಖವಾಗಿ ಈಗ ಬೇಕಿರುವುದು ಬಾಂಬ್ ಎಂದು ಲಲಿತ್ ಬಂಗಾಳಿ ಭಾಷೆಯಲ್ಲಿ ಬರೆದುಕೊಂಡಿದ್ದಾನೆ. ನವೆಂಬರ್ 5 ರಂದು ಹಂಚಿಕೊಂಡ ಮತ್ತೊಂದು ಪೋಸ್ಟ್‌ನಲ್ಲಿ 'ಜೀವನೋಪಾಯ ಮತ್ತು ಹಕ್ಕುಗಳ ಬಗ್ಗೆ ಮಾತನಾಡುವ ಯಾರೇ ಆಗಲಿ ಅಂಥವರಿಗೆ 'ಕಮ್ಯುನಿಸ್ಟ್' ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ ಎಂದು ಬರೆದಿದ್ದಾನೆ.
ತಪ್ಪು ಮಾಹಿತಿ ಭಿತ್ತರಿಸುತ್ತಿದ್ದ ಆರೋಪಿ:ಸಾಮಾಜಿಕ ಮಾಧ್ಯಮಗಳಲ್ಲಿ ಸಾಮಾಜಿಕ ಸಮಾನತೆಗೆ ಸಂಬಂಧಿಸಿದ ಪ್ರಚೋದನಕಾರಿ ಪೋಸ್ಟ್ಗಳನ್ನು ಹಂಚಿಕೊಳ್ಳುವ ಮೂಲಕ ಲಲಿತ್ ಝಾ, ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದ. ಈತನ ಜೊತೆಗೆ ಯಾರೆಲ್ಲ ಸಂಪರ್ಕ ಹೊಂದಿದ್ದಾರೆ. ಏನೆಲ್ಲಾ ಸಂಭಾಷಣೆ ನಡೆಸಿದ್ದಾರೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಆತ ಮಾಡಿದ ಎಲ್ಲ ಪೋಸ್ಟ್ಗಳನ್ನು ವಿಶ್ಲೇಷಣೆ ಮಾಡಲಾಗುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸಿದರು.
ಲಲಿತ್ ಸಾಮಾಜಿಕ ಮಾಧ್ಯಮಗಳ ನೆರವಿನಿಂದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಸಾಬೀತು ಮಾಡಲು ಹಲವು ಸಾಕ್ಷ್ಯಗಳಿವೆ. ಬಂಧನದ ಬಳಿಕ ತನಿಖೆ ವೇಳೆಯೂ ಸುಳ್ಳು ಮಾಹಿತಿ ನೀಡುತ್ತಿದ್ದಾನೆ. ಲಲಿತ್ ಸೇರಿದಂತೆ ಇತರ ನಾಲ್ವರು ಆರೋಪಿಗಳ ಬಗ್ಗೆ ಮಾಹಿತಿ ನೀಡಲು ಕೋರಿ ದೆಹಲಿ ಪೊಲೀಸರು ಟೆಲಿಕಾಂ ಸೇವಾ ಸಂಸ್ಥೆಗೆ ಪತ್ರ ಬರೆದಿದ್ದಾರೆ.
ಮೊಬೈಲ್ ಫೋನ್ ನಾಶ:ಆರೋಪಿ ಲಲಿತ್ ದೆಹಲಿಗೆ ಬರುವ ಮುನ್ನ ಐದು ಮೊಬೈಲ್ ಫೋನ್‌ಗಳನ್ನು ನಾಶಪಡಿಸಿದ್ದಾನೆ. ಈ ಮೂಲಕ ತನ್ನ ಬಗ್ಗೆ ಮಾಹಿತಿ ತಿಳಿಯದಂತೆ ರಹಸ್ಯ ಕಾಪಾಡಿಕೊಂಡಿದ್ದಾನೆ. ಇದರ ಜೊತೆಗೆ ತನ್ನ ಸಹಚರರ ಮೊಬೈಲ್ಗಳನ್ನು ನಾಶ ಮಾಡಿದ್ದಾನೆ. ಇವರೆಲ್ಲರೂ ಸಂಸತ್ ಒಳಗೆ ನುಗ್ಗುವ ಮೊದಲು ಮೊಬೈಲ್ಗಳನ್ನು ಲಲಿತ್ಗೆ ನೀಡಿದ್ದರು. ಮಹತ್ವದ ಸುಳಿವು ತನಿಖಾಧಿಕಾರಿಗಳಿಗೆ ಸಿಗದಂತೆ ಕಾಪಾಡುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:1994ರಲ್ಲೂ ಸಂಸತ್ತಿನಲ್ಲಿ ಭದ್ರತಾ ಲೋಪ: ಗ್ಯಾಲರಿಯಿಂದ ಸದನಕ್ಕೆ ಜಿಗಿದಿದ್ದ ಅಂದಿನ ಯುವಕ ಈಗ ಏನಂತಾರೆ?