ಸಿಲಿಗುರಿ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ನಾಲ್ಕು ದಿನದ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡಿದ್ದ ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಿಡಿಗೇಡಿಗಳು ಕಲ್ಲು ತೂರಿ ಜಖಂಗೊಳಿಸಿದ್ದರು. ಇಂಥ ಘಟನೆ ಮರುಕಳಿಸದಂತೆ ತಡೆಯಲು ರೈಲ್ವೆ ಪೊಲೀಸರು ಮತ್ತು ರೈಲ್ವೆ ಸಚಿವಾಲಯ ಹೆಚ್ಚುವರಿ ಮುನ್ನೆಚ್ಚರಿಕೆ ಕೈಗೊಳ್ಳಲು ನಿರ್ಧರಿಸಿದೆ. ಬುಧವಾರ ನ್ಯೂ ಜಲ್ಪೈಗುರಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲಿಗೆ ಭದ್ರತೆ ಹೆಚ್ಚಿಸುವ ಕುರಿತಾಗಿ ಆರ್‌ಪಿಎಫ್ ಮತ್ತು ಜಿಆರ್‌ಪಿಯ ಹಿರಿಯ ಅಧಿಕಾರಿಗಳಿಂದ ಮಹತ್ವದ ಸಭೆ ನಡೆಸಿದೆ.
ಸಭೆಯ ನಂತರ ರೈಲ್ವೆ ಪೊಲೀಸ್ ಅಧೀಕ್ಷಕ ಎಸ್ ಸೆಲ್ವಮುರುಗನ್ ಮಾತನಾಡಿ, ವಂದೇ ಭಾರತ್ ರೈಲಿನ ಸುರಕ್ಷಿತ ಸಂಚಾರಕ್ಕಾಗಿ ಆರ್‌ಪಿಎಫ್ ಜತೆ ರೈಲ್ವೆ ಪೊಲೀಸರು ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇದರ ಕಟ್ಟುನಿಟ್ಟಿನ ಮೇಲ್ವಿಚಾರಣೆಗಾಗಿ ವಲಯ ಆಧಾರಿತ ವಾಟ್ಸಾಪ್ ಗುಂಪುಗಳನ್ನು ರಚಿಸಲು ತೀರ್ಮಾನಿಸಿದ್ದಾರೆ. ರೈಲ್ವೆ ಪೊಲೀಸರು ವ್ಯಾಟ್ಸಾಪ್ ಗುಂಪಿನ ಮೂಲಕ ವಂದೇ ಭಾರತ ಆರಂಭದಿಂದ ಕೊನೆಯ ನಿಲ್ದಾಣ ತಲುಪವರೆಗೂ ಪ್ರತಿ ನಿಲ್ದಾಣದ ಮೇಲ್ವಿಚಾರಣೆಯ ನಿರ್ವಹಿಸಲಿದ್ದಾರೆ. ಇದಲ್ಲದೇ ರೈಲ್ವೆ ಪ್ರಾಧಿಕಾರವು ಈ ದಾಳಿಯ ತನಿಖೆಗೆ ಸಹಕರಿಸುವಂತೆ ರೈಲ್ವೆ ಅಧಿಕಾರಿಗಳು, ರಾಜ್ಯ ಸರ್ಕಾರ, ಪೊಲೀಸ್, ಗುಪ್ತಚರ ಇಲಾಖೆ ಹಾಗೂ ರೈಲ್ವೆ ಪೊಲೀಸರಲ್ಲಿ ಮನವಿ ಮಾಡಿದೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಸುಭಾಷ್ ಸರ್ಕಾರ್ ಅವರು, ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಿಡಿಗೇಡಿಗಳು ಕಲ್ಲು ತೂರಿ ಜಖಂಗೊಳಿಸಿದ ಪ್ರಕರಣವನ್ನು ಈಗಾಗಲೇ ಸಿಐಡಿ ತನಿಖೆಗೆ ಒತ್ತಾಯಿಸಿದ್ದಾರೆ. ರೈಲ್ವೆ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳೊಂದಿಗೆ ವಾಟ್ಸಾಪ್ ಗ್ರೂಪ್ ರಚಿಸಿಕೊಂಡಿದ್ದು, ಈ ಗುಂಪಿನ ಮೂಲಕ ಕಣ್ಗಾವಲು ಹಮ್ಮಿಕೊಳ್ಳಲಾಗುವುದು. ವಂದೇ ಭಾರತ್ ರೈಲು ನಿಲ್ದಾಣಕ್ಕೆ ಪ್ರವೇಶಿಸುವ ಹಾಗೂ ನಿರ್ಗಮಿಸುವ ಚಿತ್ರಗಳನ್ನು ಗ್ರೂಪ್‌ನಲ್ಲಿ ಹಂಚಿಕೊಳ್ಳಲಾಗುವುದು. ವಾಟ್ಸಾಪ್ ಗ್ರೂಪ್ದಲ್ಲಿ ಐಸಿ, ಒಸಿ ಸೇರಿದಂತೆ ಎಲ್ಲ ಪೊಲೀಸ್ ಸಿಬ್ಬಂದಿ ಇರಲಿದ್ದಾರೆ. ಇನ್ನು ಮುಂದೆ ಎನ್‌ಜೆಪಿಯಿಂದ ಹೌರಾ ವರೆಗೆ ಭದ್ರತೆ ಒದಗಿಸಲಾಗುವುದು ಎಂದು ತಿಳಿಸಿದರು.