ಜೆರುಸಲೇಂ/ ನವದೆಹಲಿ:ಇಸ್ರೇಲ್ ಹಾಗೂ ಹಮಾಸ್ ನಡುವೆ ಭೀಕರ ಯುದ್ಧ ಮುಂದುವರಿದಿದೆ. ಈ ಯುದ್ಧದಲ್ಲಿ ಅನೇಕ ದೇಶಗಳ ನಾಗರಿಕರು ಮೃತಪಟ್ಟಿದ್ದಾರೆ. ಭಾರತವು ಇಸ್ರೇಲ್‌ನಿಂದ ತನ್ನ ನಾಗರಿಕರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರಲು 'ಆಪರೇಷನ್ ಅಜಯ್' ಯಶಸ್ವಿಯಾಗಿ ನಡೆಯುತ್ತಿದೆ. ಈ ಸರಣಿಯ ಭಾಗವಾಗಿ ಇಸ್ರೇಲ್‌ನಿಂದ 212 ಭಾರತೀಯ ನಾಗರಿಕರ ಮೊದಲ ಬ್ಯಾಚ್ ಶುಕ್ರವಾರ ಬೆಳಗ್ಗೆ ನವದೆಹಲಿ ವಿಮಾನ ನಿಲ್ದಾಣವನ್ನು ಬಂದಿಳಿದಿದ್ದರು. ಜೊತೆಗೆ ಇಸ್ರೇಲ್‌ನಿಂದ ಇಬ್ಬರು ಮಕ್ಕಳು ಸೇರಿದಂತೆ 235 ಭಾರತೀಯ ಪ್ರಜೆಗಳ ಎರಡನೇ ಬ್ಯಾಚ್ ಇಂದು (ಶನಿವಾರ) ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದೆ.
235 ಭಾರತೀಯ ಪ್ರಜೆಗಳ ಎರಡನೇ ಬ್ಯಾಚ್:ಅಕ್ಟೋಬರ್ 7 ರಂದು ಗಾಜಾದಿಂದ ಹಮಾಸ್ ಹೋರಾಟಗಾರರು ಇಸ್ರೇಲಿ ಪಟ್ಟಣಗಳ ಮೇಲೆ ದಾಳಿ ನಡೆಸಿದ್ದರು. ಈ ಭೀಕರ ದಾಳಿಯ ನಂತರ ಸ್ವದೇಶಕ್ಕೆ ಮರಳಲು ಬಯಸುವವರಿಗೆ ಅನುಕೂಲವಾಗುವಂತೆ ಭಾರತ ಅಕ್ಟೋಬರ್ 12ರಂದು 'ಆಪರೇಷನ್ ಅಜಯ್' ಅನ್ನು ಆರಂಭಿಸಲಾಗಿತ್ತು. 235 ಭಾರತೀಯ ಪ್ರಜೆಗಳ ಎರಡನೇ ಬ್ಯಾಚ್ ಅನ್ನು ಶುಕ್ರವಾರ ರಾತ್ರಿ ಇಸ್ರೇಲ್‌ನಿಂದ ಸುರಕ್ಷಿತವಾಗಿ ಕಳುಹಿಸಲಾಗಿತ್ತು. ಭಾರತೀಯ ಕಾಲಮಾನ ರಾತ್ರಿ 11.02ಕ್ಕೆ ಇಸ್ರೇಲ್‌ನಿಂದ ವಿಮಾನ ಹಾರಿತು. ಜೊತೆಗೆ ಇಸ್ರೇಲ್‌ನಲ್ಲಿ ಭಾರತೀಯ ಪ್ರಜೆಗಳ ಸ್ಥಳಾಂತರಿಸುವಿಕೆ ಪ್ರಕ್ರಿಯೆ ಇಂದು (ಶನಿವಾರ) ಮುಂದುವರಿಯುತ್ತದೆ ಎಂದು ಮೂಲಗಳು ತಿಳಿಸಿವೆ.
"ರಾಯಭಾರ ಕಚೇರಿಯು ಇಂದು ವಿಶೇಷ ವಿಮಾನದಲ್ಲಿ ದೇಶಕ್ಕೆ ಮರಳಲು ಬಯಸಿದ ಬಹಳಷ್ಟು ನೋಂದಾಯಿತ ಭಾರತೀಯ ನಾಗರಿಕರಿಗೆ ಇ-ಮೇಲ್ ಮಾಡಿದೆ. ಇತರ ನೋಂದಾಯಿತ ಭಾರತದ ಪ್ರಜೆಗಳಿಗೆ ಸಂದೇಶಗಳನ್ನು ಕಳುಹಿಸಲಾಗುವುದು" ಎಂದು ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ಪೋಸ್ಟ್ ಮಾಡಿತ್ತು.
'ಆಪರೇಷನ್ ಅಜಯ್' ಕಾರ್ಯಕ್ರಮಕ್ಕೆ ಅಭಿನಂದನೆ:ಭಾರತ ಸರ್ಕಾರ 'ಆಪರೇಷನ್ ಅಜಯ್' ಕಾರ್ಯಕ್ರಮಕ್ಕೆ ಬಾರ್-ಇಲಾನ್ ವಿಶ್ವವಿದ್ಯಾಲಯದ ಸಂಶೋಧಕ ಸಫೆದ್ ಧನ್ಯವಾದ ಸಲ್ಲಿಸಿದ್ದಾರೆ. "ಇಸ್ರೇಲ್‌ನಲ್ಲಿನ ಯುದ್ಧದ ಪರಿಸ್ಥಿತಿಯಿಂದ ನಮ್ಮನ್ನು ಸ್ಥಳಾಂತರಿಸಿದ್ದಕ್ಕಾಗಿ ನಾನು ನಿಜವಾಗಿಯೂ ಭಾರತ ಸರ್ಕಾರಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ನಮ್ಮ ಸರ್ಕಾರವು 'ಆಪರೇಷನ್ ಅಜಯ್' ಅಡಿ ಅಂತಹ ಪರಿಸ್ಥಿತಿಯಿಂದ ನಮ್ಮನ್ನು ಸ್ಥಳಾಂತರಿಸಿದೆ'' ಎಂದು ಹೇಳಿದ್ದಾರೆ.