ಚಂಡೀಗಢ: ಪಂಜಾಬ್‌ನಲ್ಲಿ ತಮ್ಮ ಪಕ್ಷದ ಸರ್ಕಾರವನ್ನೇ ಪದೇ ಪದೇ ತರಾಟೆಗೆ ತೆಗೆದುಕೊಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ಮತ್ತೆ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
ರಾಜ್ಯದಲ್ಲಿ ಗ್ರಾಹಕರಿಗೆ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಈ ವಿಚಾರವಾಗಿ ಚರ್ಚಿಸಲು ವಿಧಾನಸಭೆ ಅಧಿವೇಶನವನ್ನು ವಿಸ್ತರಿಸುವಂತೆ ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ.
ಪಂಜಾಬ್ ಸರ್ಕಾರವು ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದಿಂದ ಪಿಎಸ್‌ಇಆರ್‌ಸಿಗೆ (ಪಂಜಾಬ್ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ) ತಕ್ಷಣದ ನಿರ್ದೇಶನಗಳನ್ನು ನೀಡಬೇಕು. ದೋಷಯುಕ್ತ ಪಿಪಿಎಗಳನ್ನು(ಪಂಜಾಬ್ ಖರೀದಿ ಒಪ್ಪಂದ) ಮುಕ್ತಾಯಗೊಳಿಸುವ ಉದ್ದೇಶದಿಂದ ಹೊಸ ಶಾಸನವನ್ನು ಜಾರಿಗೆ ತರಲು ಐದು ಅಥವಾ ಏಳು ದಿನಗಳ ವಿಧಾನಸಭೆಯ ಅಧಿವೇಶನ ಕರೆಯಬೇಕು ಎಂದು ಆಗ್ರಹಿಸಿದ್ದು, ಈ ಸಂಬಂಧ ಟ್ವೀಟ್ ಮಾಡಿದ್ದಾರೆ.
ಸಿಧು ವರ್ಸಸ್ ಸಿಂಗ್ ಸಂಘರ್ಷ
ಕ್ರಿಕೆಟ್ ವೃತ್ತಿ ಜೀವನದ ಬಳಿಕ ರಾಜಕೀಯ ಪ್ರವೇಶ ಮಾಡಿರುವ ಸಿಧು, ಅಮೃತಸರ್ (ಪೂರ್ವ) ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹಾಗೂ ಸಿಧು ನಡುವಿನ ಭಿನ್ನಾಭಿಪ್ರಾಯ ಮುಂದುವರೆದಿದೆ. ಇದರ ಬೆನ್ನಲ್ಲೇ ಮಧ್ಯೆ ಪ್ರವೇಶ ಮಾಡಿರುವ ಕಾಂಗ್ರೆಸ್ ಹೈಕಮಾಂಡ್ ಬಿಕ್ಕಟ್ಟು ಶಮನ ಮಾಡಲು ಮುಂದಾಗಿ ಪಕ್ಷದ ಅಧ್ಯಕ್ಷರಾಗಿ ನೇಮಕ ಮಾಡಿದೆಯಾದರೂ ಕೂಡ ಸರ್ಕಾರದ ವಿರುದ್ಧ ನಿರಂತರವಾಗಿ ಚಾಟಿ ಬೀಸುತ್ತಲೇ ಬರುತ್ತಿದ್ದಾರೆ.