ರಾಂಚಿ(ಜಾರ್ಖಂಡ್):ಜಾರ್ಖಂಡ್ ಗಣಿ ಇಲಾಖೆ ಕಾರ್ಯದರ್ಶಿ ಪೂಜಾ ಸಿಂಘಾಲ್ ನರೇಗಾ ಹಣ ದುರ್ಬಳಕೆ ಆರೋಪದ ಮೇಲೆ ಬಂಧನವಾದ ಬಳಿಕ ಇದೀಗ, ಅವರ ವಿರುದ್ಧದ ಭೂಮಿ ಅಕ್ರಮ ಹಂಚಿಕೆ ಪ್ರಕರಣದ ಅರ್ಜಿಯನ್ನು ವಿಚಾರಣೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಒಪ್ಪಿದೆ. ಇದರಿಂದ ಇ.ಡಿ. ಬಂಧನದಲ್ಲಿರುವ ಐಎಎಸ್ ಅಧಿಕಾರಿಗೆ ಮತ್ತೊಂದು ಕಂಟಕ ಶುರುವಾಗಿದೆ.
ಗಣಿ ಭೂಮಿ ಹಂಚಿಕೆಯಲ್ಲಿ ಅಕ್ರಮ ಎಸಗಿರುವ ಆರೋಪದ ಮೇಲೆ ಎಐಟಿಯುಸಿಯ ರಾಜೀವ್ ಕುಮಾರ್ ಎಂಬುವರು 2017ರಲ್ಲಿ ಸುಪ್ರೀಂಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ 2019 ರಲ್ಲಿ ವಿಚಾರಣೆ ನಡೆದಿದ್ದರೂ ಯಾವುದೇ ತೀರ್ಪು ಬಂದಿರಲಿಲ್ಲ. ಇದೀಗ ಮತ್ತೆ ಅರ್ಜಿಯ ವಿಚಾರಣೆಗೆ ಸುಪ್ರೀಂ ದಿನ ನಿಗದಿ ಮಾಡಿದೆ. ಈ ಪ್ರಕರಣದಲ್ಲಿ ಪೂಜಾ ಸಿಂಘಾಲ್ ಅಲ್ಲದೇ, ಮಾಜಿ ಮುಖ್ಯ ಕಾರ್ಯದರ್ಶಿ ರಾಜಬಾಲಾ ವರ್ಮಾ ಸೇರಿದಂತೆ ಹಲವು ಉನ್ನತ ಅಧಿಕಾರಿಗಳು ಭಾಗಿಯಾದ ಶಂಕೆಯೂ ವ್ಯಕ್ತವಾಗಿದೆ.
ಪ್ರಕರಣ ಏನು?:ಕಲ್ಲಿದ್ದಲು ಗಣಿಗಳಿಗಾಗಿ 165 ಎಕರೆ ಭೂಮಿಯನ್ನು ಹಂಚಿಕೆ ಮಾಡಲಾಗಿತ್ತು. ಗಣಿಗಾರಿಕೆಗೆ ಮಂಜೂರಾದ ಭೂಮಿಯಲ್ಲಿ ಅರಣ್ಯ ಭೂಮಿ ಮತ್ತು ಭೂದಾನ ಭೂಮಿ ಸೇರಿತ್ತು. ಭೂ ಮಂಜೂರಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಎಐಟಿಯುಸಿಯ ರಾಜೀವ್ ಕುಮಾರ್ 2015ರಲ್ಲಿ ರಾಜ್ಯಪಾಲರಿಗೆ ಪತ್ರ ಬರೆದಿದ್ದರು.