ನವದೆಹಲಿ:ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಿಬಿಐ ತನಿಖೆಗೆ ಮಧ್ಯಂತರ ತಡೆಯಾಜ್ಞೆ ತೆರವು ಮಾಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಈ ಆದೇಶವನ್ನು ಪ್ರಶ್ನಿಸಿ ಸಿಬಿಐ ಸುಪ್ರಿಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿರುದ್ಧ್ ಬೋಸ್ ಮತ್ತು ಬೇಲಾ ಎಂ. ತ್ರಿವೇದಿ ಅವರನ್ನೊಳಗೊಂಡ ಪೀಠವು, ಕರ್ನಾಟಕ ಹೈಕೋರ್ಟ್‌ನ ಜೂನ್ 12ರ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ ಮನವಿಯ ಮೇರೆಗೆ ಪ್ರತಿಕ್ರಿಯೆ ನೀಡುವಂತೆ ಡಿಕೆ ಶಿವಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ ಸದರಿ ವಿವಾರಣೆಯನ್ನು ನವೆಂಬರ್ 7, 2023ಕ್ಕೆ ಮುಂದೂಡಿದೆ.
ತನಿಖಾ ಸಂಸ್ಥೆ ಸಿಬಿಐ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು, ಡಿಕೆ ಶಿವಕುಮಾರ್ ಪ್ರಕರಣದಲ್ಲಿ ಶೇ. 90ರಷ್ಟು ತನಿಖೆ ಪೂರ್ಣಗೊಂಡಿದೆ. ಅಫಿಡವಿಟ್‌ನಲ್ಲಿ ಮಾಡಿದ ಸುಳ್ಳು ಹೇಳಿಕೆಯ ಮೇಲೆ ತಡೆಯಾಜ್ಞೆ ನೀಡಲಾಗಿದೆ. ಈ ತಡೆಯಿಂದಾಗಿ ಕೇಂದ್ರೀಯ ಸಂಸ್ಥೆಯ ಮುಂದಿನ ತನಿಖೆ ಸ್ಥಗಿತಗೊಂಡಿದೆ. ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆಯಿಂದಾಗಿ ಅದು ಮುಂದುವರಿಯುತ್ತಿಲ್ಲ. ಹಾಗಾಗಿ ಈ ತಡೆಯಾಜ್ಞೆ ಹಿಂತೆಗೆದುಕೊಳ್ಳಲು ನ್ಯಾಯಾಲಯಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿಕೊಂಡರು.
ಇವರ ವಾದ ಆಲಿಸಿದ ನ್ಯಾಯಾಲಯವು, ನಾವು ಅದನ್ನು ತಡೆಯಲಾಗದು, ಆ ವ್ಯಕ್ತಿ ಎಲ್ಲಿಯೂ ಓಡಿಹೋಗುವುದಿಲ್ಲ. ನಾವು ಈ ವಿಷಯವನ್ನು ಪರಿಶೀಲಿಸುತ್ತೇವೆ ಎಂದಿದೆ. ಪ್ರತಿಕ್ರಿಯೆ ನೀಡುವಂತೆ ಡಿಕೆ ಶಿವಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿರುವ ಸುಪ್ರೀಂಕೋರ್ಟ್ ಪೀಠ, ನವೆಂಬರ್ 7ಕ್ಕೆ ವಿಚಾರಣೆ ಮುಂದೂಡಿದೆ.
ಡಿಕೆ ಶಿವಕುಮಾರ್ ತಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ ಇಂಧನ ಸಚಿವರಾಗಿದ್ದಾಗ ಏಪ್ರಿಲ್ 2013 ರಿಂದ ಏಪ್ರಿಲ್ 2018ರ ವರೆಗೆ ಆದಾಯದ ಮೂಲಗಳಿಗೆ ಅನುಗುಣವಾಗಿ 74.93 ಕೋಟಿ ರೂ. ಸಂಪತ್ತನ್ನು ಸಂಗ್ರಹಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಅಕ್ಟೋಬರ್‌ನಲ್ಲಿ ಅವರ ವಿರುದ್ಧ 2020ರ ಭ್ರಷ್ಟಾಚಾರದ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆಯು ಆಗಸ್ಟ್ 2017ರಲ್ಲಿ ಅವರೊಂದಿಗೆ ಸಂಪರ್ಕ ಹೊಂದಿದ ಸುಮಾರು 70 ಕಡೆಗಳಲ್ಲಿ ನಡೆಸಿದ ಶೋಧದ ಫಲಿತಾಂಶಗಳ ಆಧಾರದ ಮೇಲೆ ಸಿಬಿಐ ಎಫ್‌ಐಆರ್ ದಾಖಲಿಸಿದೆ.
ಈ ವರ್ಷದ ಫೆಬ್ರವರಿಯಲ್ಲಿ ನ್ಯಾಯಮೂರ್ತಿ ಕೆ ನಟರಾಜನ್ ನೇತೃತ್ವದ ಹೈಕೋರ್ಟ್‌ನ ಏಕಸದಸ್ಯ ಪೀಠವು 2020ರ ಈ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಕುಮಾರ್‌ಗೆ ತಾತ್ಕಾಲಿಕ ರಿಲೀಫ್ ನೀಡಿತ್ತು. ಸಿಬಿಐ ತನಿಖೆ ನಡೆಯುತ್ತಿದ್ದಾಗ ಏಪ್ರಿಲ್‌ನಲ್ಲಿ, ಏಕ ನ್ಯಾಯಾಧೀಶರು ಅವರ ಮನವಿಯನ್ನು ವಜಾಗೊಳಿಸಿದ್ದರು. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರ್ಲೆ ನೇತೃತ್ವದ ವಿಭಾಗೀಯ ಪೀಠವು ಜೂನ್, 2023ರಲ್ಲಿ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿತ್ತು.
ಇನ್ನು ಕುಮಾರಕೃಪ ಅತಿಥಿ ಗೃಹದ ಬಳಿ ಪ್ರಕರಣ ಕುರಿತು ಡಿಸಿಎಂ ಪ್ರತಿಕ್ರಿಯೆ ನೀಡಿದ್ದಾರೆ. ಹೈಕೋರ್ಟ್ ತಡೆಯಾಜ್ಞೆ ತೆರವಿಗೆ ಸಿಬಿಐ ಮಾಡಿದ್ದ ಮನವಿಯನ್ನು ತಳ್ಳಿ ಹಾಕಿರುವ ಸುಪ್ರೀಂ ಕೋರ್ಟ್, ‘ಶಿವಕುಮಾರ್ ಎಲ್ಲಿಯೂ ಓಡಿ ಹೋಗೋಲ್ಲ’ ಎಂದು ಹೇಳಿರುವ ಬಗ್ಗೆ ಗಮನ ಸೆಳೆದಾಗ, ಹೌದು, ನಾನು ಎಲ್ಲಿಯೂ ಓಡಿ ಹೋಗುವುದಿಲ್ಲ. ನ್ಯಾಯಾಲಯದ ವಿಚಾರಣೆ, ನೆಲದ ಕಾನೂನನ್ನು ನಾನು ಗೌರವಿಸುತ್ತೇನೆ ಎಂದರು.
ಯಾರಿಗೆ ಏನು ಉತ್ತರ ನೀಡಬೇಕೋ ನೀಡುತ್ತೇನೆ. ಅವರಿಗೆ ಐಟಿ ಇಲಾಖೆ ಪ್ರಕ್ರಿಯೆ ಗೊತ್ತಿಲ್ಲ. ಅವರು ಏಜೆಂಟರಂತೆ ಮಾತನಾಡುತ್ತಿದ್ದಾರೆ. ಅವರಂತೆ ನಾನು ಮಾತನಾಡುವುದಿಲ್ಲ. ನಾನು ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಅವರಂತೆ ಮಾತನಾಡಲು ಸಾಧ್ಯವಿಲ್ಲ. ನ್ಯಾಯಾಲಯದ ವಿಚಾರದಲ್ಲಿ ಆ ರೀತಿ ಮಾತನಾಡಿದರೆ ತಪ್ಪಾಗುತ್ತದೆ. ಅವರಿಗೆ ಉತ್ತರ ನೀಡಲು ಮುಹೂರ್ತ ಫಿಕ್ಸ್ ಮಾಡುತ್ತೇನೆ ಎಂದು ಇದೇ ವೇಳೆ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ಕೂಡಾ ನೀಡಿದರು.
ಇದನ್ನೂ ಓದಿ:"ಐಟಿ ರೇಡ್ನಲ್ಲಿ ಸಿಕ್ಕ ಹಣ ಎಸ್ಎಸ್ಟಿ ಟ್ಯಾಕ್ಸ್ಗೆ ಸೇರಿದ್ದು": ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗಂಭೀರ ಆರೋಪ