ನವದೆಹಲಿ: ನೀಟ್ ಅಭ್ಯರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸುವ ಬಗ್ಗೆ ಕೇಂದ್ರಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂಕೋರ್ಟ್, ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದೆ. ನ್ಯಾ.ಯು.ಲಲಿತ್, ನ್ಯಾ.ಎಸ್.ರವೀಂದ್ರ ಭಟ್ ಹಾಗೂ ನ್ಯಾ.ಬೇಲಾ ಎಂ.ತ್ರಿವೇದಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ನೀಟ್ ಪಿಜಿ ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿತು.
ಪರೀಕ್ಷೆಗೆ ಬಹಳ ದೂರ ಪ್ರಯಾಣಿಸಬೇಕು ಎಂದು ಅರ್ಜಿದಾರರು ಕೋರ್ಟ್‌ಗೆ ಮನವರಿಕೆ ಮಾಡುವ ಪ್ರಯತ್ನ ನಡೆಸಿದರು. ಈ ಕುರಿತ ವಾದ ಆಲಿಸಿದ ನ್ಯಾಯಪೀಠ, ಪ್ರಸ್ತುತ ದೇಶದಲ್ಲಿ ಎಲ್ಲವೂ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ನೆನಪಿಸಿತು. ಅಭ್ಯರ್ಥಿಗಳು ಎಲ್ಲಿ ಬೇಕಾದರೂ ಸುಲಭವಾಗಿ ಹೋಗಬಹುದು. ಈಗ ಯಾವುದೇ ನಿರ್ಬಂಧಗಳಿಲ್ಲ. ನೀವು ಯಾವುದೇ ವಿಮಾನ ನಿಲ್ದಾಣಕ್ಕೆ ಹೋದರೂ ವಿಮಾನದಲ್ಲಿ ಸೀಟ್ ಪಡೆಯಬಹುದು. ಜನರು ದೆಹಲಿಯಿಂದ ಚೆನ್ನೈಗೆ ಹೋಗಬಹುದು. ಅವರು ದೆಹಲಿಯಿಂದ ಕೊಚ್ಚಿಗೆ ಹೋಗಬಹುದು ಎಂದು ಕೋರ್ಟ್ ಹೇಳಿದೆ.