ನವದೆಹಲಿ:ಅಕ್ರಮ ಆಸ್ತಿ ಪ್ರಕರಣದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ. ಈ ಪ್ರಕರಣದಲ್ಲಿ ಜಗನ್ ಅವರ ಜಾಮೀನು ರದ್ದು ಮಾಡಬೇಕೆಂದು ಕೋರಿರುವ ಅರ್ಜಿ ವಿಚಾರಣೆ ವೇಳೆ, ನೋಟಿಸ್ ನೀಡಲಾಗಿದೆ.
ಅಪೃತ್ತ ವೈಆರ್ಎಸ್ ಕಾಂಗ್ರೆಸ್ ಸಂಸದ ರಾಘು ರಾಮಕೃಷ್ಣ ರಾಜು ಅವರು ಸಿಎಂ ಜಗನ್ ಅವರ ಜಾಮೀನು ರದ್ದುಗೊಳಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ, ವಿಚಾರಣೆಯ ಸಮಯದಲ್ಲಿ ಹಾಜರಾಗುವುದರಿಂದ ಅವರಿಗೆ ಶಾಶ್ವತ ವಿನಾಯಿತಿ ನೀಡಿರುವುದನ್ನು ಪ್ರಶ್ನಿಸಲಾಗಿದೆ. ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಪಂಕಜ್ ಮಿಥಾಲ್ ಅವರನ್ನೊಳಗೊಂಡ ಪೀಠ ಅರ್ಜಿ ವಿಚಾರಣೆ ನಡೆಸಿ, ವಿಚಾರಣೆಗೆ ಶಾಶ್ವತ ವಿನಾಯಿತಿ ಕುರಿತಂತೆ ಸಿಎಂ ಜಗನ್ ಹಾಗೂ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಕೇಳಿದೆ.
ಇದನ್ನೂ ಓದಿ:ಅವ್ಯವಹಾರ ಆರೋಪ: ಆಂಧ್ರ ಸಿಎಂ ಜಗನ್, ಸಚಿವರು, ಅಧಿಕಾರಿಗಳು ಸೇರಿ 41 ಜನರಿಗೆ ಹೈಕೋರ್ಟ್ ನೋಟಿಸ್
ಇದಕ್ಕೂ ಮುನ್ನ ಸಂಸದ ರಾಜು ಪರ ವಕೀಲರಾದ ಬಾಲಾಜಿ ಶ್ರೀನಿವಾಸನ್ ಮತ್ತು ರೋಹನ್ ದಿವಾನ್ ಅವರು, ಜಗನ್ ಅವರಿಗೆ ನೀಡಿರುವ ಜಾಮೀನು ಬಗ್ಗೆ ಇದುವರೆಗೆ ಸಿಬಿಐ ಮತ್ತು ಇಡಿ ಪ್ರಶ್ನಿಸಿಲ್ಲ ಎಂದು ಪೀಠದ ಗಮನಕ್ಕೆ ತಂದರು. ಆಗ ಪೀಠವು, ಈಗ ಜಾಮೀನು ರದ್ದು ಮಾಡಬೇಕೇ? ಎಂದು ವಕೀಲರನ್ನು ಪ್ರಶ್ನಿಸಿತು. ಆಗ ವಕೀಲರು ನೋಟಿಸ್ ಜಾರಿ ಮಾಡಿ ಮುಂದಿನ ಕ್ರಮಕೈಗೊಳ್ಳುವಂತೆ ಪೀಠಕ್ಕೆ ಕೋರಿದರು.
ಸಿಎಂ ಜಗನ್ ವಿರುದ್ಧದ ಪ್ರಕರಣದಲ್ಲಿ 2022ರ ಆಗಸ್ಟ್ 26ರಂದು ಮತ್ತು 2022ರ ಅಕ್ಟೋಬರ್ 28ರಂದು ತೆಲಂಗಾಣ ಹೈಕೋರ್ಟ್ ನೀಡಿದ್ದ ಆದೇಶಗಳ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. ಆಗಸ್ಟ್ 26ರಂದು ಹೈಕೋರ್ಟ್, ಜಗನ್ ಅವರಿಗೆ ಸಿಬಿಐ ನ್ಯಾಯಾಲಯದ ವಿಚಾರಣೆಗೆ ಹಾಜರಾಗುವುದರಿಂದ ಶಾಶ್ವತ ವಿನಾಯಿತಿ ನೀಡಿದೆ. ಮತ್ತೊಂದೆಡೆ, ಈ ಪ್ರಕರಣಗಳ ವಿಚಾರಣೆಯನ್ನು ಹೈದರಾಬಾದ್‌ನಿಂದ ದೆಹಲಿಗೆ ವರ್ಗಾಯಿಸುವಂತೆ ಸಂಸದ ರಾಜು ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ. ಅದರೊಂದಿಗೆ ಈ ಅರ್ಜಿಯನ್ನು ಲಗತ್ತಿಸುವಂತೆ ರಿಜಿಸ್ಟ್ರಿಗೆ ಪೀಠ ಸೂಚಿಸಿದೆ.
40 ಸಾವಿರ ಕೋಟಿ ಅಕ್ರಮ ಆಸ್ತಿ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಹತ್ತು ವರ್ಷಗಳಿಂದ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಆದರೂ, ಸಿಬಿಐ ಗಮನ ಹರಿಸುತ್ತಿಲ್ಲ. ಅಪರಾಧದ ಗಂಭೀರತೆ ಅರಿತು ಜಗನ್ ಮೋಹನ್ ರೆಡ್ಡಿ ಜಾಮೀನು ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಈ ಹಿಂದೆ ನ.3ರಂದು ಹೈದರಾಬಾದ್‌ನಿಂದ ಬೇರೆಡೆಗೆ ಪ್ರಕರಣಗಳ ವರ್ಗಾವಣೆ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಸಿಎಂ ಜಗನ್ ಹಾಗೂ ಸಿಬಿಐಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.
ಇದನ್ನೂ ಓದಿ:ಅಕ್ರಮ ಆಸ್ತಿ ಆರೋಪ ಪ್ರಕರಣದ ವರ್ಗಾವಣೆ ಕೋರಿ ಅರ್ಜಿ: ಆಂಧ್ರ ಸಿಎಂ ಜಗನ್, ಸಿಬಿಐಗೆ ಸುಪ್ರೀಂ ಕೋರ್ಟ್ ನೋಟಿಸ್