ನವದೆಹಲಿ:2002ರ ಗುಜರಾತ್ನ ಗೋಧ್ರೋತ್ತರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ ಆರೋಪ ಎದುರಿಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರಿಗೆ ಜುಲೈ 19ರವರೆಗೆ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ಸುಪ್ರೀಂಕೋರ್ಟ್ ಬುಧವಾರ ವಿಸ್ತರಿಸಿದೆ. ಇದೇ ವೇಳೆ, ಗುಜರಾತ್ ಸರ್ಕಾರಕ್ಕೆ ನ್ಯಾಯ ಪೀಠ ನೋಟಿಸ್ ಜಾರಿ ಮಾಡಿದೆ.
ಸದ್ಯ ಜಾಮೀನಿನ ಮೇಲೆ ಹೊರಗಡೆ ಇರುವ ತೀಸ್ತಾ ಸೆಟಲ್ವಾಡ್ ಅವರಿಗೆ ಜುಲೈ 1ರಂದು ತಕ್ಷಣವೇ ಶರಣಾಗುವಂತೆ ಗುಜರಾತ್ ಹೈಕೋರ್ಟ್ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಸೆಟಲ್ವಾಡ್ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ನಡೆದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಎ.ಎಸ್.ಬೋಪಣ್ಣ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠವು ಸೆಟಲ್ವಾಡ್ ಸಲ್ಲಿಸಿದ ಮೇಲ್ಮನವಿಯ ಕುರಿತು ಗುಜರಾತ್ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು.
ವಿಚಾರಣೆಯ ಆರಂಭದಲ್ಲಿ ದಾಖಲೆಗಳ ಭಾಷಾಂತರಕ್ಕೆ ಸಮಯ ಬೇಕು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ನ್ಯಾಯಪೀಠಕ್ಕೆ ಕಾಲಾವಕಾಶ ಕೋರಿದರು. ಈ ಮನವಿಗೆ ಸಮ್ಮತಿಸಿದ ಪೀಠವು ಜುಲೈ 19ಕ್ಕೆ ವಿಚಾರಣೆಯನ್ನು ಮುಂದೂಡಿತು. ಸೆಟಲ್ವಾಡ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಈ ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಪೀಠವನ್ನು ಒತ್ತಾಯಿಸಿದರು.
ಇದನ್ನೂ ಓದಿ:ಗುಜರಾತ್ ಹೈಕೋರ್ಟ್ ಜಾಮೀನು ತಿರಸ್ಕರಿಸಿದ ಬೆನ್ನಲ್ಲೇ ಸುಪ್ರೀಂ ಮೊರೆ ಹೋದ ತೀಸ್ತಾ: ನ್ಯಾಯಮೂರ್ತಿಗಳಿಂದ ವಿಭಿನ್ನ ನಿಲುವು
ಗೋಧ್ರಾ ನಂತರದ ಗಲಭೆ ಪ್ರಕರಣಗಳಲ್ಲಿ ಅಮಾಯಕರನ್ನು ಸಿಲುಕಿಸಲು ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದ ಮೇಲೆ ತೀಸ್ತಾ ಸೆಟಲ್ವಾಡ್, ಗುಜರಾತ್ ಮಾಜಿ ಪೊಲೀಸ್ ಮಹಾನಿರ್ದೇಶಕ ಆರ್.ಬಿ ಶ್ರೀಕುಮಾರ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ವಿರುದ್ಧ ಕೇಸ್ ದಾಖಲಾಗಿದೆ. ಇದೇ ಪ್ರಕರಣದಲ್ಲಿ ಮೂವರನ್ನು 2022ರ ಜೂನ್ 25ರಂದು ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು.
ನಂತರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ತೀಸ್ತಾ ಸೆಟಲ್ವಾಡ್ ಜಾಮೀನಿನ ಮೇಲೆ ಸೆಪ್ಟೆಂಬರ್ 3ರಂದು ಬಿಡುಗಡೆಯಾಗಿದ್ದರು. ಮತ್ತೆ ಜುಲೈ 1ರಂದು ಜಾಮೀನು ಅರ್ಜಿಯ ವಿಚಾರಣೆ ಗುಜರಾತ್ ಹೈಕೋರ್ಟ್ ಮುಂದೆ ಬಂದಿತ್ತು. ಆಗ ತಕ್ಷಣವೇ ಶರಣಾಗುವಂತೆ ಹೈಕೋರ್ಟ್ ಸೂಚಿಸಿತ್ತು. ಇದರ ಬೆನ್ನಲ್ಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ತೀಸ್ತಾ ಸೆಟಲ್ವಾಡ್ ಅವರಿಗೆ ಬಂಧನದಿಂದ ಒಂದು ವಾರದ ಕಾಲ ರಕ್ಷಣೆ ನೀಡಲಾಗಿತ್ತು.
ಇದಕ್ಕೂ ಮುನ್ನ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಧ್ಯಂತರ ರಕ್ಷಣೆ ನೀಡುವ ಕುರಿತು ವಿಭಿನ್ನ ನಿಲುವು ವ್ಯಕ್ತಪಡಿಸಿದ್ದರು. ಜಾಮೀನು ನೀಡುವ ಪ್ರಶ್ನೆಯಲ್ಲಿ ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ. ಆದ್ದರಿಂದ ಈ ವಿಷಯವನ್ನು ಉನ್ನತ ಪೀಠಕ್ಕೆ ನಿಯೋಜಿಸುವಂತೆ ಮುಖ್ಯ ನ್ಯಾಯಮೂರ್ತಿಗಳಿಗೆ ನ್ಯಾಯಮೂರ್ತಿಗಳು ಕೋರಿದ್ದರು. ಅಂತೆಯೇ, ಮೂವರು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಎ.ಎಸ್.ಬೋಪಣ್ಣ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವನ್ನು ರಚಿಸಲಾಗಿತ್ತು. ಅಂದು (ಜುಲೈ 1) ರಾತ್ರಿ 9:15ಕ್ಕೆ ಸೆಟಲ್ವಾಡ್ ಅರ್ಜಿಯನ್ನು ಮೂವರು ನ್ಯಾಯಮೂರ್ತಿಗಳು ತ್ವರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದ್ದರು.
ಇದನ್ನೂ ಓದಿ:ತೀಸ್ತಾ ಸೆಟಲ್ವಾಡ್ ಶರಣಾಗತಿಗೆ ಸೂಚಿಸಿದ್ದ ಗುಜರಾತ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ