ನವದೆಹಲಿ: ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಆನಂದ್ ತೇಲ್ತುಂಬ್ಡೆಗೆ ನೀಡಿರುವ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಎನ್‌ಐಎ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಅಲ್ಲದೇ, ದಲಿತ ಸಂಚಲನದ ಬಗ್ಗೆ ತೇಲ್ತುಂಬ್ಡೆ ಉಪನ್ಯಾಸ ನೀಡುತ್ತಿದ್ದರು. ಇದು ಭಯೋತ್ಪಾದನೆಯೇ? ಎಂದು ಅಸಿಸ್ಟೆಂಟ್ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿಯಾ ಅವರನ್ನು ಪೀಠವು ಪ್ರಶ್ನಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ನೇತೃತ್ವದ ಪೀಠ ಬಾಂಬೆ ಹೈಕೋರ್ಟ್‌ನ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಆದಾಗ್ಯೂ, ವಿಚಾರಣೆಯ ವೇಳೆಯಲ್ಲಿ ಹೈಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯ ಪ್ರಾಮುಖ್ಯತೆ ಪಡೆಯುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ತೇಲ್ತುಂಬ್ಡೆ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಪೀಠದ ಮುಂದೆ ವಾದ ಮಂಡಿಸಿ, ಹೈಕೋರ್ಟ್ ಈಗಾಗಲೇ ಈ ವಿಷಯವನ್ನು ವ್ಯವಹರಿಸಿದೆ ಮತ್ತು ಅವರ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂಬುದಾಗಿ ಅಭಿಪ್ರಾಯಪಟ್ಟಿದೆ ಎಂದಿದ್ದಾರೆ.