ನವದೆಹಲಿ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣದ ಶಿಕ್ಷೆಗೆ ತಡೆ ನೀಡಲು ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಎಚ್ ಎಂ ಪ್ರಚ್ಚಕ್ ಅವರನ್ನು 'ಉತ್ತಮ ನ್ಯಾಯ ನಿರ್ವಹಣೆ'ಗಾಗಿ ಪಾಟ್ನಾ ಹೈಕೋರ್ಟ್ಗೆ ವರ್ಗಾವಣೆ ಮಾಡಲು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.
2019 ರಲ್ಲಿ ನಡೆದ ರಾಜಕೀಯ ರ‍್ಯಾಲಿಯಲ್ಲಿ ಮೋದಿ ಉಪನಾಮದ ಬಗ್ಗೆ ಹೇಳಿಕೆ ನೀಡಿದ್ದ ಕುರಿತು ಗುಜರಾತ್ನ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ವಿಧಿಸಿದ್ದ ಎರಡು ವರ್ಷಗಳ ಶಿಕ್ಷೆಯನ್ನು ತಡೆಯಲು ನ್ಯಾಯಮೂರ್ತಿ ಪ್ರಚ್ಚಕ್ ನಿರಾಕರಿಸಿದ್ದರು. ಗುಜರಾತ್ ಹೈಕೋರ್ಟ್ನಲ್ಲಿ ರಿಲೀಫ್ ಸಿಗದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸುಪ್ರೀಂಕೋರ್ಟ್ನಲ್ಲಿ, ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ನೇತೃತ್ವದ ಪೀಠ ರಾಹುಲ್ ಗಾಂಧಿ ಅವರಿಗೆ ವಿಧಿಸಿದ್ದ ಶಿಕ್ಷೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದರು.
ಮೋದಿ ಉಪನಾಮದ ವಿರುದ್ಧ ಹೇಳಿಕೆಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಸುಪ್ರೀಂ ರಿಲೀಫ್ ನೀಡಿತ್ತು. 'ಯಾವಾಗ ಒಂದು ಅಪರಾಧವು, ಗುರುತಿಸಲಾಗದ, ಜಾಮೀನು ನೀಡಬಹುದಾದ ಹಾಗೂ ಸಂಯೋಜಿತವಾದಾಗ ವಿಚಾರಣಾ ನ್ಯಾಯಾಧೀಶರು, ಪ್ರಕರಣದಲ್ಲಿ ಸತ್ಯ ಮತ್ತು ಸನ್ನಿವೇಶಗಳ ಆಧಾರದ ಮೇಲೆ ವಿಧಿಸಲಾಗಿರುವ ಶಿಕ್ಷೆಗೆ ನಿಖರವಾದ ಕಾರಣ ನೀಡಬೇಕಿತ್ತು. ಇನ್ನು ಶಿಕ್ಷೆಗೆ ತಡೆಯಾಜ್ಞೆ ನೀಡುವ ಅರ್ಜಿಯನ್ನು ತಿರಸ್ಕರಿಸುವ ವೇಳೆ ಹೈಕೋರ್ಟ್ ಈ ಬಗ್ಗೆ ಪುಟಗಳಷ್ಟು ವಿವರಣೆ ನೀಡಿದೆಯಾದರೂ, ಗರಿಷ್ಠ ಶಿಕ್ಷೆ ವಿಧಿಸಿದ್ದಕ್ಕೆ ನೀಡಲಾಗಿರುವ ಕಾರಣಗಳಲ್ಲಿ ನಾವು ಗಮನಿಸಿರುವ ಅಂಶಗಳೇ ಇಲ್ಲ ಎಂದು ಹೇಳಿತ್ತು.