ನವದೆಹಲಿ: ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 375ರ ಅಡಿ ಅತ್ಯಾಚಾರ ಪ್ರಕರಣದಲ್ಲಿ ಮಹಿಳೆಯನ್ನು ಆರೋಪಿಯನ್ನಾಗಿ ಮಾಡಬಹುದೇ ಎಂಬ ಪ್ರಶ್ನೆ ಸುಪ್ರೀಂಕೋರ್ಟ್ ಮುಂದೆ ಉದ್ಭವಿಸಿದೆ. ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375ರ ಅಡಿ ಮಹಿಳೆಯರ ಮೇಲೆ ಅತ್ಯಾಚಾರದ ಪ್ರಕರಣ ದಾಖಲಿಸಬಹುದೇ ಎಂದು ಪರಿಶೀಲಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.
ತನ್ನ ಮಗನ ವಿರುದ್ಧದ ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲಾಗಿದೆ ಎಂದು ಆರೋಪಿಸಿ 61 ವರ್ಷದ ವಿಧವೆಯೊಬ್ಬರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸಿತು. ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಸಂಜಯ್ ಕರೋಲ್ ಅವರನ್ನೊಳಗೊಂಡ ನ್ಯಾಯಪೀಠ, ಅತ್ಯಾಚಾರ ಪ್ರಕರಣದಲ್ಲಿ ಮಹಿಳೆಯ ಮೇಲೂ ಪ್ರಕರಣ ದಾಖಲಿಸಬಹುದೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿತು. ಅತ್ಯಾಚಾರ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯನ್ನು ಮಾತ್ರ ಆರೋಪಿಯನ್ನಾಗಿ ಮಾಡಬಹುದು ಎಂಬ ಮೌಖಿಕ ಹೇಳಿಕೆ ನ್ಯಾಯಪೀಠ ಗಮನಿಸಿತು. ಅರ್ಜಿದಾರರ ಪರ ವಕೀಲ ರಿಷಿ ಮಲ್ಹೋತ್ರಾ, ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.
ಅರ್ಜಿದಾರ ಮಹಿಳೆ ಬಂಧನಕ್ಕೆ ತಡೆಯಾಜ್ಞೆ ನೀಡಿದ ಸುಪ್ರೀಂ:ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಮಹಿಳೆ ಸಾಮಾನ್ಯ ಉದ್ದೇಶವನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಿಯಾ ಪಟೇಲ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿದೆ ಎಂದು ಮಲ್ಹೋತ್ರಾ ಪೀಠದ ಗಮನಕ್ಕೆ ತಂದರು. ಮಹಿಳೆಯ ಮನವಿ ಪುರಸ್ಕರಿಸಿದ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿ, ಬಂಧನಕ್ಕೆ ತಡೆಯಾಜ್ಞೆ ನೀಡಿತು.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 375, ಅತ್ಯಾಚಾರದ ಅಪರಾಧವನ್ನು ವ್ಯಾಖ್ಯಾನಿಸುತ್ತದೆ ಮತ್ತು ಈ ನಿಬಂಧನೆ ಪುರುಷನನ್ನು ಅಪರಾಧಿ ಎಂದು ಉಲ್ಲೇಖಿಸುವ ಮೂಲಕ ಪ್ರಾರಂಭವಾಗುತ್ತದೆ. ಅಂದರೆ ಅತ್ಯಾಚಾರ ಅಪರಾಧಕ್ಕಾಗಿ ಪುರುಷರ ಮೇಲೆ ಮಾತ್ರ ಪ್ರಕರಣ ದಾಖಲಿಸಬಹುದಾಗಿದೆ.
ಏನಿದು ಪ್ರಕರಣ?:ದೂರುದಾರೆ ಫೇಸ್‌ಬುಕ್ ಮೂಲಕ ಭೇಟಿಯಾದ ನಂತರ ಅರ್ಜಿದಾರ ಮಹಿಳೆಯ ಹಿರಿಯ ಪುತ್ರನೊಂದಿಗೆ ದೀರ್ಘಕಾಲದ ಸಂಬಂಧವನ್ನು ಹೊಂದಿದ್ದರು. ದೂರುದಾರೆ ಮತ್ತು ಅಮೆರಿಕದಲ್ಲಿ ವಾಸಿಸುತ್ತಿರುವ ಅರ್ಜಿದಾರ ಮಹಿಳೆಯ ಹಿರಿಯ ಮಗ ಯಾವುದೇ ವಿಧಿವಿಧಾನಗಳು ಅಥವಾ ಸಮಾರಂಭಗಳಿಲ್ಲದೇ ವಿಡಿಯೋ ಕರೆ ಮೂಲಕ ವಿವಾಹವಾಗಿದ್ದರು ಎಂದು ಹೇಳಲಾಗಿದೆ. ಅರ್ಜಿದಾರ ಮಹಿಳೆಯ ಹಿರಿಯ ಮಗ ದೂರುದಾರರನ್ನು ದೈಹಿಕವಾಗಿ ಭೇಟಿ ಮಾಡಿಲ್ಲ. ಇದರ ನಡುವೆ ದೂರುದಾರೆ ಅರ್ಜಿದಾರ ಮಹಿಳೆಯ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದರು.
ದೂರುದಾರೆ ಮತ್ತು ತನ್ನ ಹಿರಿಯ ಮಗನ ನಡುವಿನ ಅನೌಪಚಾರಿಕ ವಿವಾಹವನ್ನು ಕೊನೆಗೊಳಿಸುವಂತೆ ಆಕೆಯ ಕುಟುಂಬ ಸದಸ್ಯರು ತನ್ನ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದರು. ಈ ಸಂಬಂಧವನ್ನು ಕೊನೆಗೊಳಿಸಲು ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ದೂರುದಾರೆಯೊಂದಿಗೆ ರಾಜಿ ಒಪ್ಪಂದವನ್ನು ಮಾಡಿಸಲಾಗಿತ್ತು ಎಂದು ಅರ್ಜಿದಾರ ಮಹಿಳೆ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ. ರಾಜಿ ಸಂಧಾನದ ಭಾಗವಾಗಿ ಅರ್ಜಿದಾರ ಮಹಿಳೆ ದೂರುದಾರೆಗೆ ಈ ವರ್ಷದ ಫೆಬ್ರವರಿಯಲ್ಲಿ 11 ಲಕ್ಷ ರೂ.ಗಳನ್ನು ನೀಡಿದ್ದರು.
ರಾಜಿ ಮಾಡಿಕೊಂಡ ಒಂದು ವಾರದ ನಂತರ, ದೂರುದಾರೆ ಅರ್ಜಿದಾರ ಮಹಿಳೆ ಮತ್ತು ಆಕೆಯ ಕಿರಿಯ ಮಗನ ವಿರುದ್ಧ ಅತ್ಯಾಚಾರ (ಐಪಿಸಿಯ ಸೆಕ್ಷನ್ 376 (2) (ಎನ್), ಅಕ್ರಮ ಬಂಧನ (ಸೆಕ್ಷನ್ 342), ಹಲ್ಲೆ (ಸೆಕ್ಷನ್ 323) ಮತ್ತು ಕ್ರಿಮಿನಲ್ ಬೆದರಿಕೆ (ಸೆಕ್ಷನ್ 506) ಮಾಡಿದ್ದಾರೆ ಎಂದು ಆರೋಪಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ ಎಂದು ಅರ್ಜಿದಾರ ಮಹಿಳೆ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಪಂಜಾಬ್‌ನ ವಿಚಾರಣಾ ನ್ಯಾಯಾಲಯವು ಅರ್ಜಿದಾರ ಮಹಿಳೆಗೆ ಬಂಧನ ಪೂರ್ವ ಜಾಮೀನು ನೀಡಲು ನಿರಾಕರಿಸಿತ್ತು. ಅದೇ ರೀತಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಬಂಧನಕ್ಕೆ ಮುಂಚಿತವಾಗಿ ಅರ್ಜಿದಾರ ಮಹಿಳೆಗೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿತ್ತು. ಇದರಿಂದ ಅರ್ಜಿದಾರ ಮಹಿಳೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ಮುಖ್ಯ ಕಾರ್ಯದರ್ಶಿ ನೇಮಕ: ದೆಹಲಿ ಸಿಎಂ - ಲೆಫ್ಟಿನೆಂಟ್ ಗವರ್ನರ್ ಸಭೆಗೆ ಸುಪ್ರೀಂಕೋರ್ಟ್ ಸಲಹೆ