ನವದೆಹಲಿ:ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ (Salman Khurshid)ಅವರ ಇತ್ತೀಚಿನ ಪುಸ್ತಕದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ಉಂಟುಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಪುಸ್ತಕದಲ್ಲಿ ವಿವಾದಾತ್ಮಕ ಅಂಶಗಳಿವೆ ಎಂದು ಪ್ರತಿಭಟನೆ ನಡೆಸಲಾಗುತ್ತಿದೆ. ಈ ಬೆನ್ನಲ್ಲೇ ನೈನಿತಾಲ್‌ನಲ್ಲಿರುವ ಅವರ ನಿವಾಸಕ್ಕೆ ಬೆಂಕಿ ಹಚ್ಚಿರುವ ಘಟನೆ ಬೆಳಕಿಗೆ ಬಂದಿದೆ.
ಪುಸ್ತಕದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ: ಮಾಜಿ ಕೇಂದ್ರ ಸಚಿವ ಖುರ್ಷಿದ್ ನಿವಾಸಕ್ಕೆ ಬೆಂಕಿ
ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ (Former Union Minister/ Congress leader Salman Khurshid) ಅವರ 'ಸನ್ರೈಸ್ ಓವರ್ ಅಯೋಧ್ಯಾ' ಪುಸ್ತಕದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಉತ್ತರಾಖಂಡದ ನೈನಿತಾಲ್‌ನಲ್ಲಿರುವ ಅವರ ನಿವಾಸಕ್ಕೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಉತ್ತರಾಖಂಡ್ನ ನೈನಿತಾಲ್‌ನಲ್ಲಿರುವ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ. ಘಟನೆಯ ವಿಡಿಯೋ ತುಣುಕೊಂದನ್ನು ಕಾಂಗ್ರೆಸ್ ಮುಖಂಡರು ಹಂಚಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ರಾಕೇಶ್ ಕಪಿಲ್ ಸೇರಿದಂತೆ ಇತರೆ 20 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಾಖಂಡ್ ಡಿಜಿಐ ನಿಲೇಶ್ ಆನಂದ್ ತಿಳಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಬರೆದಿರುವ 'ಸನ್ರೈಸ್ ಓವರ್ ಅಯೋಧ್ಯಾ'(Sunrise Over Ayodhya) ಎಂಬ ಪುಸ್ತಕ ನವೆಂಬರ್ 10 ರಂದು ಬಿಡುಗಡೆಯಾಗಿದೆ. ಅದರಲ್ಲಿ ಖುರ್ಷಿದ್ ಹಿಂದುತ್ವವನ್ನು ಐಸಿಸ್ ಸಂಘಟನೆಗೆ ಹೋಲಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ದೂರು ಸಹ ದಾಖಲಾಗಿದೆ.