ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯು 2022ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಗುರುವಾರ ಪ್ರಕಟಿಸಿದ್ದು, ಕರ್ನಾಟಕದ ಇಬ್ಬರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಮುಖ ಲೇಖಕರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ 'ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ' ಕೃತಿಯು ಈ ವರ್ಷದ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದ್ದರೆ, ಅನುವಾದ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರ 'ಸೀತಾ: ರಾಮಾಯಣದ ಸಚಿತ್ರ ಮರುಕಥನ' ಅನುವಾದ ಕೃತಿ ಆಯ್ಕೆಯಾಗಿದೆ.
ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರ ಅಧ್ಯಕ್ಷತೆಯಲ್ಲಿ ನವದೆಹಲಿಯ ರವೀಂದ್ರ ಭವನದಲ್ಲಿ ನಡೆದ ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಮಂಡಳಿಯು 2022ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಖ್ಯಾತ ಹಿಂದಿ ಕವಿ ಬದ್ರಿ ನಾರಾಯಣ್ ಅವರ ‘ತುಮ್ಡಿ ಕೆ ಶಬ್ದ’ ಕವನ ಸಂಕಲನಕ್ಕಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಿಸಲಾಗಿದೆ. ಇಂಗ್ಲಿಷ್ ಕಾದಂಬರಿ 'ಆಲ್ ದಿ ಲೈಕ್ಸ್ ವಿ ನೆವರ್ ಲಿವ್ಡ್' ಕೃತಿಗೆ ಅನುರಾಧಾ ರಾಯ್ ಮತ್ತು ತಮಿಳು ಕಾದಂಬರಿ 'ಕಾಲಾ ಪಾನಿ'ಗಾಗಿ ಎಂ.ರಾಜೇಂದ್ರನ್ ಅವರಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ. ಜನವರಿ 1, 2016 ರಿಂದ ಡಿಸೆಂಬರ್ 31, 2020 ರವರೆಗೆ ಮೊದಲ ಬಾರಿಗೆ ಪ್ರಕಟವಾದ ಪುಸ್ತಕಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಇದೇ ವೇಳೆ 23 ಭಾರತೀಯ ಭಾಷೆಗಳಲ್ಲಿನ ವಿವಿಧ ಪ್ರಕಾರದ ಸಾಹಿತ್ಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಇದರಲ್ಲಿ ಏಳು ಕವನ ಸಂಕಲನಗಳು, ಆರು ಕಾದಂಬರಿಗಳು, ಎರಡು ಕಥಾಸಂಗ್ರಹಗಳು, ಎರಡು ಸಾಹಿತ್ಯ ವಿಮರ್ಶೆಗಳು, ಮೂರು ನಾಟಕಗಳು, ಒಂದು ಆತ್ಮಚರಿತ್ರೆಯ ಪ್ರಬಂಧ, ಸಂಕ್ಷಿಪ್ತ ಸಿಂಧಿ ಸಾಹಿತ್ಯ ಇತಿಹಾಸದ ಪುಸ್ತಕಗಳು ಮತ್ತು ಲೇಖನಗಳ ಸಂಗ್ರಹ ಪ್ರಶಸ್ತಿ ಸೇರಿದೆ.
ಕನ್ನಡದ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅವರ 'ಬಹುತ್ವದ ಭಾರತ ಮತ್ತು ಬೌದ್ಧ ತಾತ್ತ್ವಿಕತೆ' ಕೃತಿಯು ವಿವಿಧ ಪ್ರಬಂಧಗಳ ಸಂಕಲನವಾಗಿದೆ. ಇದನ್ನು ಗದಗದ ಲಡಾಯಿ ಪ್ರಕಾಶನವು ಪ್ರಕಟಿಸಿದೆ. ಪತ್ರಕರ್ತ ಪದ್ಮರಾಜ ದಂಡಾವತಿ ಅವರು ದೇವದತ್ತ ಪಟ್ಟನಾಯಕ ಅವರ ‘ಸೀತಾ: ರಾಮಾಯಣದ ಸಚಿತ್ರ ಮರುಕಥನ' ಕೃತಿಯನ್ನು ಇಂಗ್ಲಿಷ್ನಿಂದ ಕನ್ನಡಕ್ಕೆ ಅನುವಾದಿಸಿದ್ದು ಧಾರವಾಡದ ಮನೋಹರ ಗ್ರಂಥಮಾಲೆಯು ಪ್ರಕಟಿಸಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ವಿಭಾಗದ ಸಂಚಾಲಕರಾಗಿರುವ ಡಾ.ಸರಜೂ ಕಾಟ್ಕರ್ ಉಸ್ತುವಾರಿಯಲ್ಲಿ ಈ ಪ್ರಶಸ್ತಿ ಆಯ್ಕೆಯು ನಡೆಯಿತು. ಅನುವಾದ ಆಯ್ಕೆ ಸಮಿತಿಯ ಜ್ಯೂರಿಗಳಾಗಿ ಜಗದೀಶ್ ಕೊಪ್ಪ, ಕಮಲಾಕರ ಭಟ್ಟ ಹಾಗೂ ಮೋಹನ್ ಕುಂಟಾರ ಕಾರ್ಯ ನಿರ್ವಹಿಸಿದ್ದರೆ, ಮುಖ್ಯ ಪ್ರಶಸ್ತಿ ಆಯ್ಕೆ ಸಮಿತಿಗೆ ಡಾ. ಸಿ.ನಾಗಣ್ಣ, ಪದ್ಮರಾಜ ದಂಡಾವತಿ ಹಾಗೂ ಚಂದ್ರಶೇಖರ ವಸ್ತ್ರದ ಅವರು ಜ್ಯೂರಿಗಳಾಗಿದ್ದರು. ಮುಖ್ಯ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ಹಾಗೂ ಸನ್ಮಾನ ಒಳಗೊಂಡಿದ್ದರೆ, ಅನುವಾದ ಪ್ರಶಸ್ತಿ ಐವತ್ತು ಸಾವಿರ ರೂಪಾಯಿ ಹಾಗೂ ಸನ್ಮಾನ ಒಳಗೊಂಡಿರುತ್ತವೆ.
ಇದನ್ನೂ ಓದಿ:86ನೇ ಕನ್ನಡ ಸಾಹಿತ್ಯ ಸಮ್ಮೇಳನ.. ಸ್ಥಳೀಯರ ಮನೆಯಲ್ಲಿ ವಾಸ್ತವ್ಯ ಮಾಡುವೆ.. ಮಹೇಶ ಜೋಶಿ