ರಾಜಸ್ಥಾನ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾರಥ್ಯದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು ಸದ್ಯಕ್ಕೆ ರಾಜಸ್ಥಾನದಲ್ಲಿ ಸಾಗುತ್ತಿದೆ. ಇಂದು ದೌಸಾದ ಕಲಾಖೋದಿಂದ ಪಾದಯಾತ್ರೆ ಪುನಾರಂಭಗೊಳ್ಳುತ್ತಿದ್ದಂತೆ ಕೆಲವು ಯುವಕರು ಸಚಿನ್ ಪೈಲಟ್ ಪರವಾಗಿ ಜಯಘೋಷಣೆಗಳನ್ನು ಮೊಳಗಿಸಿದ್ದಾರೆ.
ಸಚಿನ್ ಪೈಲಟ್ ಜಿಂದಾಬಾದ್ (ಸಚಿನ್ ಪೈಲಟ್ಗೆ ಜಯವಾಗಲಿ), ಹಮಾರಾ ಸಿಎಂ ಕೈಸಾ ಹೋ? (ನಮ್ಮ ಮುಖ್ಯಮಂತ್ರಿ ಹೇಗಿರಬೇಕು),ಸಚಿನ್ ಪೈಲಟ್ ಜೈಸಾ ಹೋ, (ನಮ್ಮ ಸಿಎಂ ಸಚಿನ್ ಸಚಿನ್ ಪೈಲಟ್ನಂತಿರಬೇಕು) ಎಂದು ಕೂಗಿದರು. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವೆ ಬಹುಕಾಲದಿಂದ ಆಂತರಿಕ ಕಲಹ ನಡೆಯುತ್ತಿದ್ದು, ಈ ಘಟನೆ ಅದಕ್ಕೆ ಪುಷ್ಟಿ ನೀಡುವಂತಿತ್ತು.
ಈ ಹಿಂದೆ ಭಾರತ್ ಜೋಡೋ ಯಾತ್ರೆಯು ರಾಜ್ಯವನ್ನು ಪ್ರವೇಶಿಸುವ ಮುನ್ನಾ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಶೋಕ್ ಗೆಹ್ಲೋಟ್, ಪೈಲಟ್ 'ಗದ್ದರ್' (ದೇಶದ್ರೋಹಿ) ಆಗಿದ್ದು, 2020 ರಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದು ಪಕ್ಷ ಉರುಳಿಸಲು ಪ್ರಯತ್ನಿಸಿದ್ದರು. ಇಂತಹವರಿಗೆ ನಾನು ಸಹಾಯ ಮಾಡುವುದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು.
ಇಬ್ಬರು ನಾಯಕರ ನಡುವಿನ ಭಿನ್ನಾಭಿಪ್ರಾಯವನ್ನು ಕಡಿಮೆ ಮಾಡಲು ರಾಹುಲ್ ಗಾಂಧಿ ಸಹ ಪ್ರಯತ್ನಿಸಿದ್ದಾರೆ. ಇಬ್ಬರೂ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಆಸ್ತಿ ಇದ್ದಂತೆ. ಯುವ ನಾಯಕರಾದ ಪೈಲಟ್ ಅವರು 2020 ರಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದಿದ್ದರು. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ರಾಜ್ಯ ಸರ್ಕಾರವನ್ನು ಪತನದ ಅಂಚಿಗೆ ತಂದಿದ್ದರು. ಆದಾಗ್ಯೂ, ಗೆಹ್ಲೋಟ್ ಮತ್ತು ಪೈಲಟ್ ಇಬ್ಬರೂ ಭಾರತ್ ಜೋಡೋ ಯಾತ್ರೆಗೆ ತಮ್ಮ ಬೆಂಬಲ ನೀಡಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.
ಇದನ್ನೂ ಓದಿ:ಆಡಳಿತ ವಿರೋಧಿ ಅಲೆ ಇಲ್ಲ, ಇದೇ ನಮ್ಮ ಸಾಧನೆ: ರಾಜಸ್ಥಾನ ಸಿಎಂ ಗೆಹ್ಲೋಟ್