ಜೈಪುರ (ರಾಜಸ್ಥಾನ): ರಾಜಸ್ಥಾನದಲ್ಲಿ ವಸುಂಧರಾ ರಾಜೇ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕಾಂಗ್ರೆಸ್ ನಾಯಕ, ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ತಮ್ಮದೇ ರಾಜ್ಯ ಸರ್ಕಾರದ ವಿರುದ್ಧ ಒಂದು ದಿನದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಮಂಗಳವಾರ ಜೈಪುರದ ಶಹೀದ್ ಸ್ಮಾರಕದಲ್ಲಿ ಪೈಲಟ್ ಉಪವಾಸ ಕುಳಿತಿದ್ದು, ಸಂಜೆ 4ರವರೆಗೆ ಈ ಸತ್ಯಾಗ್ರಹ ಮುಂದುವರಿಯಲಿದೆ.
ಈ ಹಿಂದೆ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಕುರಿತ ಕ್ರಮ ಕೈಗೊಳ್ಳದಿದ್ದಕ್ಕಾಗಿ ಸಚಿನ್ ಪೈಲಟ್, ತಮ್ಮದೇ ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದು, ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ಒಂದು ದಿನ ಉಪವಾಸ ಕುಳಿತುಕೊಳ್ಳುವ ನಿರ್ಧಾರವನ್ನು ಪ್ರಕಟಿಸಿದ್ದರು. ಆದರೆ, ಪಕ್ಷದಲ್ಲಿ ವಿರೋಧ ವ್ಯಕ್ತವಾಗಿತ್ತು. ರಾಜ್ಯ ಸರ್ಕಾರದ ವಿರುದ್ಧ ಯಾವುದೇ ರೀತಿಯ ಪ್ರತಿಭಟನೆ ನಡೆಸಿದರೆ, ಅದು ಪಕ್ಷ ವಿರೋಧಿ ಚಟುವಟಿಕೆಯಾಗುತ್ತದೆ ಮತ್ತು ಪಕ್ಷದ ಹಿತಾಸಕ್ತಿ ವಿರುದ್ಧವಾಗುತ್ತದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ರಾಜಸ್ಥಾನದ ಉಸ್ತುವಾರಿ ಸುಖ್‌ಜಿಂದರ್ ಸಿಂಗ್ ರಾಂಧವಾ ಹೇಳಿದ್ದರು.
ಇದ್ಯಾವುದಕ್ಕೂ ಅಂಜದೇ ಸಚಿನ್ ಪೈಲಟ್ ಇಂದು ಬೆಳಗ್ಗೆ 11 ಗಂಟೆ ಉಪವಾಸ ಆರಂಭಿಸಿದ್ದಾರೆ. ಶಹೀದ್ ಸ್ಮಾರಕಕ್ಕೆ ಆಗಮಿಸುವ ಮೊದಲು ಪೈಲಟ್ ಅವರು ಸಮಾಜ ಸುಧಾರಕ ಜ್ಯೋತಿರಾವ್ ಫುಲೆ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ತಮ್ಮ ಸತ್ಯಾಗ್ರಹ ಶುರು ಮಾಡಿದರು. ಸ್ಥಳದಲ್ಲಿ ಹಾಕಲಾದ ಬ್ಯಾನರ್‌ನಲ್ಲಿ "ವಸುಂಧರಾ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರ ವಿರುದ್ಧ ಉಪವಾಸ" ಎಂದು ಬರೆಯಲಾಗಿದೆ. ಅಲ್ಲದೇ, "ವೈಷ್ಣವ್ ಜಾನ್ ತೋ ತೆನೆ ಕಹಿಯೇ" ಎಂಬ ಹಾಡುಗಳ ಪ್ರಸಾರ ಕೂಡ ಮಾಡಲಾಗುತ್ತಿದೆ.
ಇದೇ ವೇಳೆ ಆಡಳಿತ ಪಕ್ಷದ ಯಾವುದೇ ಹಾಲಿ ಶಾಸಕರು ಉಪವಾಸ ಸ್ಥಳಕ್ಕೆ ಬರದಂತೆ ಸಚಿನ್ ಪೈಲಟ್ ಹೇಳಿದ್ದರು. ಇದರಿಂದ ಹೆಚ್ಚಿನ ಶಾಸಕರು ಸ್ಥಳಕ್ಕೆ ಬಂದಿಲ್ಲ. ಆದರೆ, ಶಾಸಕ ಸಂತೋಷ್ ಸಹರನ್ ಮತ್ತು ರಾಮನಾರಾಯಣ ಗುರ್ಜರ್ ಸೇರಿದಂತೆ ಹಲವಾರು ಮುಖಂಡರು ಮತ್ತು ಸಚಿನ್ ಅವರ ಬೆಂಬಲಿಗರು ಉಪವಾಸ ಸತ್ಯಾಗ್ರಹ ಸ್ಥಳದಲ್ಲಿ ಉಪಸ್ಥಿತರಿದ್ದಾರೆ.
ಬಿಗಡಾಯಿಸಿದ ನಾಯಕತ್ವ ಬಿಕ್ಕಟ್ಟು:ಮರುಭೂಮಿ ರಾಜ್ಯವಾದ ರಾಜಸ್ಥಾನದಲ್ಲಿ 2018ರ ಡಿಸೆಂಬರ್ನಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿತ್ತು. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಸಚಿನ್ ಪೈಲಟ್ ರಾಜಸ್ಥಾನ ಕಾಂಗ್ರೆಸ್ ಮುಖ್ಯಸ್ಥರಾಗಿದ್ದರು. ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವೆ ಪೈಪೋಟಿ ಇತ್ತು. ಕಾಂಗ್ರೆಸ್ ಹೈಕಮಾಂಡ್ ಗೆಹ್ಲೋಟ್ ಅವರನ್ನು ಮೂರನೇ ಬಾರಿಗೆ ಸಿಎಂ ಹುದ್ದೆಗೆ ನೇಮಿಸಿತ್ತು. ಸಚಿನ್ ಪೈಲಟ್ ಅವರನ್ನು ಡಿಸಿಎಂ ಆಗಿ ಆಯ್ಕೆ ಮಾಡಿತ್ತು. ಹೀಗೆ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದಲೂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವೆ ಭಿನ್ನಾಭಿಪ್ರಾಯ ಎದ್ದು ಕಾಣುತ್ತಿದ್ದು, ಇದು ತೀರಾ ದೊಡ್ಡ ಮಟ್ಟಕ್ಕೂ ಹೋಗಿದೆ.
2020ರ ಜುಲೈ ತಿಂಗಳಲ್ಲಿ ಪೈಲಟ್ ಮತ್ತು ಕಾಂಗ್ರೆಸ್ ಶಾಸಕರ ಒಂದು ಬಣವು ಗೆಹ್ಲೋಟ್ ವಿರುದ್ಧ ಬಹಿರಂಗವಾಗಿ ಬಂಡಾಯದ ಬಾವುಟ ಹಾರಿತ್ತು. ಜೊತೆಗೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಒತ್ತಾಯಿಸಲಾಗಿತ್ತು. ಇದೀಗ ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ನಲ್ಲಿನ ಬಣ ಕಲಹದ ನಡುವೆ ಪೈಲಟ್ ಅವರ ಉಪವಾಸವು ರಾಜ್ಯದಲ್ಲಿ ನಾಯಕತ್ವದ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಇದನ್ನು ಪರಿಹರಿಸಲು ಪಕ್ಷದ ಹೈಕಮಾಂಡ್ ಮೇಲೆ ಒತ್ತಡವನ್ನೂ ಹೆಚ್ಚಿಸಿದೆ.
ಇದನ್ನೂ ಓದಿ:ಬಿಜೆಪಿ ಭ್ರಷ್ಟಾಚಾರದ ಬಗ್ಗೆ ತನಿಖೆಗೆ ಸಿಎಂ ಗೆಹ್ಲೋಟ್‌ಗೆ ಪತ್ರ ಬರೆದಿದ್ದೆ, ಉತ್ತರ ಸಿಕ್ಕಿಲ್ಲ- ಸಚಿನ್ ಪೈಲಟ್