ತಿರುವನಂತಪುರ/ಕೇರಳ :ಈ ವರ್ಷದ ತೀರ್ಥೋದ್ಭವದ ಆರಂಭದ ಸಂಕೇತವಾಗಿ ಶಬರಿಮಲೆ ದೇವಸ್ಥಾನ(Sabarimala temple)ಸೋಮವಾರ ತೆರೆಯಲಾಗಿದೆ. ಇಂದಿನಿಂದ ದೇಗುಲದೊಳಗೆ ಭಕ್ತರಿಗೆ(Devotees)ಪ್ರವೇಶ ಕಲ್ಪಿಸಲಾಗ್ತಿದೆ.
ನಾಳೆಯಿಂದ ಶಬರಿಮಲೆ ದೇವಾಲಯಕ್ಕೆ ಭಕ್ತರಿಗೆ ಅವಕಾಶ ಕೋವಿಡ್(covid) ಮತ್ತು ಪ್ರವಾಹ ಉಂಟಾದ ಹಿನ್ನೆಲೆ ಎರಡು ವರ್ಷಗಳ ನಂತರ ಪೂರ್ಣ ಋತುಮಾನದ ತೀರ್ಥಯಾತ್ರೆಗೆ(Pilgrimage)ಅನುಮತಿ ನೀಡಲಾಗುತ್ತಿದೆ.
ಮಂಗಳವಾರದಿಂದ ದಿನಕ್ಕೆ 30,000 ಭಕ್ತರಿಗೆ ದೇವಸ್ಥಾನದ ಒಳಗೆ ಪ್ರವೇಶ ನೀಡಲಾಗುವುದು. ವರ್ಚುವಲ್ ಕ್ಯೂ ಬುಕ್ಕಿಂಗ್ ಮೂಲಕ ಪ್ರವೇಶವನ್ನು ನಿಯಂತ್ರಿಸಲಾಗುತ್ತದೆ. ಮಂಗಳವಾರದಂದು ವರ್ಚುವಲ್ ಕ್ಯೂ ಮೂಲಕ ದರ್ಶನಕ್ಕೆ 8,000 ಮಂದಿ ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ.
ಭಾರಿ ಮಳೆ ಹಿನ್ನೆಲೆ ಮೊದಲ ಮೂರು ದಿನ ಭಕ್ತರಿಗೆ ಹೆಚ್ಚಿನ ನಿರ್ಬಂಧ ಹೇರಲಾಗುವುದು ಎಂದು ದೇವಸ್ವಂ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಶಬರಿಮಲೆಗೆ ತೆರಳುವ ಬಹುತೇಕ ಪ್ರಮುಖ ರಸ್ತೆಗಳು ಜಲಾವೃತಗೊಂಡಿವೆ. ಹೀಗಾಗಿ, ಪಂಪಾ ನದಿಯಲ್ಲಿ ಸ್ನಾನ ಮಾಡುವಂತಿಲ್ಲ.
ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸುವ ಸಲುವಾಗಿ, ಎರಡು ಡೋಸ್ ಲಸಿಕೆ ಪಡೆದ ಹಾಗೂ RTPCR ನೆಗೆಟಿವ್ ರಿಪೋರ್ಟ್ ಹೊಂದಿರುವ ಭಕ್ತರಿಗೆ ಮಾತ್ರ ದೇವಾಲಯಕ್ಕೆ ಭೇಟಿ ನೀಡಲು ಅನುಮತಿಸಲಾಗುತ್ತದೆ.
ಈ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಭೂಕುಸಿತದ ಅಪಾಯ ಇರುವುದರಿಂದ ಈ ಪ್ರದೇಶಗಳಲ್ಲಿ ರಾತ್ರಿ ಪ್ರಯಾಣವನ್ನು ನಿಷೇಧಿಸಲಾಗಿದೆ. ಸ್ವಾಮಿ ಅಯ್ಯಪ್ಪನ ರಸ್ತೆಯ ಮೂಲಕ ಮಾತ್ರ ಭಕ್ತರಿಗೆ ಪ್ರವೇಶ ನೀಡಲಾಗುವುದು. ಪತ್ತನಂತಿಟ್ಟ ಜಿಲ್ಲಾಡಳಿತ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿ ಭಕ್ತರಿಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಿದೆ.
ಕೆಎಸ್‌ಆರ್‌ಟಿಸಿ ವಿವಿಧ ಡಿಪೋಗಳಿಂದ ವಿಶೇಷ ಸೇವೆಗಳನ್ನು ನಡೆಸುತ್ತಿದೆ. ಭಕ್ತರ ವಾಹನಗಳನ್ನು ನಿಲಕ್ಕಲ್ ತನಕ ಮಾತ್ರ ಅನುಮತಿಸಲಾಗುವುದು ಮತ್ತು ನಿಲಕ್ಕಲ್‌ನಿಂದ ಪಂಬಾಗೆ ಭಕ್ತರನ್ನು ಕರೆದೊಯ್ಯಲು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಒದಗಿಸಲಾಗಿದೆ. ಪಂಬಾದಲ್ಲಿ ವಾಹನ ನಿಲುಗಡೆಗೆ ಅವಕಾಶವಿರುವುದಿಲ್ಲ.
ಭೇಟಿ ನೀಡುವ ಭಕ್ತರ ಆರೋಗ್ಯ ಹಾಗೂ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಶಬರಿಮಲೆ, ಅಪ್ಪಂ ಮತ್ತು ಅರಾವಣನ ಮುಖ್ಯ ಪ್ರಸಾದ ಸಾಕಷ್ಟು ದಾಸ್ತಾನು ಇದೆ ಮತ್ತು ಭಕ್ತರು ಯಾವುದೇ ತೊಂದರೆ ಇಲ್ಲದೆ ಅವುಗಳನ್ನು ಪಡೆಯಬಹುದಾಗಿದೆ.
ಭಕ್ತರಿಗೆ ಪ್ರಮುಖ ಸಲಹೆಗಳು :ಬೆಟ್ಟವನ್ನು ಹತ್ತುವಾಗ ವಿಶೇಷ ಎಚ್ಚರಿಕೆ ವಹಿಸಬೇಕು. ಏಕೆಂದರೆ, ಮಳೆ ಹಿನ್ನೆಲೆ ದಾರಿಯು ಹೆಚ್ಚು ಜಾರುತ್ತದೆ.
- ಭಕ್ತರು ಪರಸ್ಪರ ಎರಡು ಮೀಟರ್ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
- ಮಾಸ್ಕ್ ಧರಿಸಿ, ಮಾತನಾಡುವಾಗ ಮಾಸ್ಕ್ ತೆಗೆಯಬೇಡಿ
- ಬಳಸಿದ ಮಾಸ್ಕ್, ತ್ಯಾಜ್ಯ ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯಬೇಡಿ
- ಹ್ಯಾಂಡ್ ಸ್ಯಾನಿಟೈಸರ್ ಅನ್ನು ಒಯ್ಯಿರಿ, ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳಿ/ಸ್ಯಾನಿಟೈಸ್ ಮಾಡಿ.
- ಜ್ವರ ಮತ್ತು ಉಸಿರಾಟದ ತೊಂದರೆ ಇರುವವರು ತೀರ್ಥಯಾತ್ರೆ ಕೈಗೊಳ್ಳಬಾರದು
ಕೋವಿಡ್‌ಗೆ ತುತ್ತಾಗಿದ್ದವರು ಸುಮಾರು ಮೂರು ತಿಂಗಳ ಕಾಲ ಮೇಲಕ್ಕೆ ಏರುವಾಗ ಗಂಭೀರ ಉಸಿರಾಟ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆಯಿದೆ.
ಆದ್ದರಿಂದ ದಯವಿಟ್ಟು ನಿಮ್ಮ ದೈಹಿಕ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಿ ಮತ್ತು ಅಂತಹ ವ್ಯಕ್ತಿಗಳು ತೀರ್ಥಯಾತ್ರೆಗೆ ಮುಂಚಿತವಾಗಿ ಶ್ವಾಸಕೋಶ ಮತ್ತು ಹೃದಯ ಸಂಬಂಧಿತ ಪರೀಕ್ಷೆಗೆ ಒಳಗಾಗಲು ಸೂಚಿಸಲಾಗಿದೆ.