ಅಮ್ಗುರಿ (ಅಸ್ಸೋಂ):ರಷ್ಯಾದ ಹವ್ಯಾಸಿ ನೌಕಾಯಾನಿಯೊಬ್ಬರು ಭಾರತದ ಏಕೈಕ ಗಂಡು ನದಿಯಾದ ಬ್ರಹ್ಮಪುತ್ರವನ್ನು ಅನ್ವೇಷಿಸಲು ಮುಂದಾಗಿದ್ದು, ಇದಕ್ಕೆಂದು ಅವರೇ ಅಚ್ಚುಕಟ್ಟಾದ ದೋಣಿಯನ್ನು ನಿರ್ಮಿಸುತ್ತಿದ್ದಾರೆ. ಪ್ರಪಂಚದ ಹಲವು ವಿಶೇಷ ತಾಣ, ನದಿಗಳನ್ನು ದಾಟಿ ಬಂದಿರುವ ಇವರು ಸದ್ಯ ಅಸ್ಸೋಂನ ಹಳ್ಳಿಯೊಂದರಲ್ಲಿ ಬೀಡುಬಿಟ್ಟಿದ್ದಾರೆ.
ಅಸ್ಸೋಂನ ಶಿವಸಾಗರ ಜಿಲ್ಲೆಯ ದಿಘಲ್ ದರಿಯಾಲಿ ಎಂಬ ಕುಗ್ರಾಮವು ಹೊರ ಪ್ರಪಂಚಕ್ಕೆ ಅಷ್ಟೇನೂ ಪರಿಚಿತವಲ್ಲ. ಇಂಥದ್ದೊಂದು ಹಳ್ಳಿಗೆ ರಷ್ಯಾದ ನೌಕಾಯಾನಿ ವೈಸಿಲಿ ಎಂಬುವರು ಹುಡುಕಿಕೊಂಡು ಬಂದು ಇಲ್ಲಿಯೇ ಉಳಿದುಕೊಂಡಿದ್ದಾನೆ. ಪ್ರಪಂಚದ ಹಲವು ಗುಪ್ತ ಪ್ರದೇಶ ಮತ್ತು ನದಿಗಳ ರಹಸ್ಯವನ್ನು ತಿಳಿಯುವುದೇ ಈತನ ಕೆಲಸವಾಗಿದೆ. ಹೀಗೆ ಹುಡುಕಿಕೊಂಡು ಬಂದು ಅಸ್ಸೋಂ ಸೇರಿದ್ದಾನೆ.
ತಾವೇ ತಯಾರಿಸಿದ ದೋಣಿಯಲ್ಲಿ ಸಂಚಾರ:ನೌಕಾಯಾನಿ ವೈಸಿಲಿಯ ವಿಶೇಷವೆಂದರೆ, ಪ್ರಪಂಚದ ನದಿಗಳ ವಿಶೇಷತೆಯನ್ನು ಅರಿಯಲು ತನ್ನ ಕೈಯಿಂದಲೇ ದೋಣಿಯನ್ನು ತಯಾರಿಸಿಕೊಂಡು ಅದರಲ್ಲೇ ಯಾನ ನಡೆಸುತ್ತಿದ್ದಾರೆ. ಈತನ ಮುಂದಿನ ಗುರಿ ಈಶಾನ್ಯ ಭಾರತದ ದೊಡ್ಡ ಮತ್ತು ಏಕೈಕ ಗಂಡುನದಿ ಬ್ರಹ್ಮಪುತ್ರ.
ರಷ್ಯಾದ ಪ್ರಜೆ ತಿಂಗಳ ಹಿಂದೆ ಭಾರತಕ್ಕೆ ಬಂದಿದ್ದಾರೆ. ದಿಘಲ್ ದರಿಯಾಲಿ ಗ್ರಾಮವನ್ನು ಸದ್ಯದ ವಾಸಸ್ಥಾನ ಮಾಡಿಕೊಂಡಿದ್ದಾರೆ. ಪ್ರಪಂಚದ ವಿವಿಧ ದೇಶಗಳಲ್ಲಿ ತಾನೇ ನಿರ್ಮಿಸಿಕೊಂಡ ದೋಣಿಗಳಲ್ಲಿ ಪ್ರಯಾಣಿಸಿ ನದಿ ತೀರದ ಜನರ ಜೀವನ ವಿಧಾನ ಮತ್ತು ಅವರ ಸಂಸ್ಕೃತಿಯನ್ನು ಅಧ್ಯಯನ ನಡೆಸಿ ಹೊರ ಜಗತ್ತಿಗೆ ಅದನ್ನು ಪಸರಿಸುವುದೇ ಇವರ ಕಾರ್ಯವಾಗಿದೆ.
ಬ್ರಹ್ಮಪುತ್ರ ನದಿಯ ವೈಶಾಲ್ಯತೆಗೆ ಆಕರ್ಷಿತರಾಗಿ, ಅದರ ಬಗ್ಗೆ ಮಾಹಿತಿ ಪಡೆದುಕೊಂಡ ವೈಸಿಲಿ ಅಸ್ಸೋಂಗೆ ಬಂದರು. ಬಳಿಕ ಅಲ್ಲಿಂದಲೇ ಯಾನ ಆರಂಭಿಸಲು ಉದ್ದೇಶಿಸಿ ಹಡಗು ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಅಕ್ಟೋಬರ್ 20 ರೊಳಗೆ ದೋಣಿ ಪೂರ್ಣಗೊಳ್ಳಲಿದೆ. ನಂತರ ದಿಖೌಮುಖ್‌ನಿಂದ ಬ್ರಹ್ಮಪುತ್ರ (ನದಿಯ ಪ್ರವೇಶ ಬಿಂದು) ಮೂಲಕ ಪ್ರಯಾಣ ಬೆಳೆಸಲಿದ್ದಾರೆ. ಅವರ ಜೊತೆಗೆ ಇಬ್ಬರು ಇಂಡೋನೇಷಿಯನ್ನರೂ ಇರಲಿದ್ದಾರೆ.
ನದಿ ಆರಂಭಿಕ ಬಿಂದುವಿನಿಂದ ಧುಬ್ರಿ (ನಿರ್ಗಮನ ಬಿಂದು) ಗೆ ತೆರಳಲಿದ್ದಾರೆ. ನಂತರ ಬಾಂಗ್ಲಾದೇಶವನ್ನು ಪ್ರವೇಶಿಸುವ ಯೋಜನೆಯನ್ನು ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ರಷ್ಯಾ ನೌಕಾಯಾನಿ ಕನ್ಯಾಕುಮಾರಿಯವರೆಗೂ ನದಿ ಅನ್ವೇಷಣೆಯನ್ನು ಮಾಡುವುದಾಗಿ ತಿಳಿಸಿದ್ದಾರೆ.
ಸಂತರ ಪುಸ್ತಕ ರಷ್ಯಾ ಭಾಷೆಗೆ ತರ್ಜುಮೆ:ರಷ್ಯನ್ ನೌಕಾಯಾನಿ ವೈಸಿಲಿ, ಕೇವಲ ವಿವಿಧ ನದಿಗಳ ಅಧ್ಯಯನ ನಡೆಸುವುದರ ಮೂಲಕ ವೈಷ್ಣವ ಶ್ರೇಷ್ಠ ಸಂತರಾದ ಶ್ರೀಮನಾಥ ಶಂಕರದೇವ್ ಮತ್ತು ಮಧಬ್ದೇವ್ ಅವರ ಬಗ್ಗೆ ಪ್ರಚಾರ ಮಾಡಲಾಗುವುದು. ಅಸ್ಸಾಮಿ ಸಂಪ್ರದಾಯ ಮತ್ತು ಸಂಸ್ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವೈಸಿಲಿ, ಇಲ್ಲಿನ ಮಹಾನ್ ಸಂತರ ಸಾಹಿತ್ಯ ಕೃತಿಗಳನ್ನು ರಷ್ಯನ್ ಭಾಷೆಗೆ ಅನುವಾದಿಸುವ ಬಗ್ಗೆಯೂ ಯೋಚನೆ ಹೊಂದಿದ್ದಾರೆ. ತನ್ನ ಪ್ರಯಾಣದ ವೇಳೆ ನದಿ ದಡದಲ್ಲಿ ವಾಸಿಸುವ ಜನರ ಜೀವನವನ್ನು ಅಧ್ಯಯನ ಮಾಡುವುದು ಮತ್ತು ಅದನ್ನು ಹೊರಜಗತ್ತಿಗೆ ತಿಳಿಸುವ ಕೆಲಸ ಮಾಡಲಾಗುವುದು. ಅಸ್ಸೋಂನ ಹಳ್ಳಿಗಳ ಪರಿಸರ ಮತ್ತು ಆತಿಥ್ಯದ ಬಗ್ಗೆ ತಾನು ವಿಸ್ಮಯನಾಗಿದ್ದೇನೆ ಎಂದು ರಷ್ಯನ್ ಪ್ರಜೆ ಹೇಳಿದ್ದಾರೆ.
ಇದನ್ನೂ ಓದಿ:ಲಷ್ಕರ್-ಎ-ತೊಯ್ಬಾ ಇಬ್ಬರು ಭಯೋತ್ಪಾದಕರ ಬಂಧನ: ಭಾರಿ ಸ್ಫೋಟಕ, ಶಸ್ತ್ರಾಸ್ತ್ರಗಳ ವಶಕ್ಕೆ