ನವದೆಹಲಿ:''ಗ್ಲೋಬಲ್ ಸೌತ್‌ನ ಗುಂಪಿನ ಸದಸ್ಯ ರಾಷ್ಟ್ರಗಳ ಏಕೀಕೃತ ಪ್ರಯತ್ನಗಳಿಂದಾಗಿ ಪಾಶ್ಚಿಮಾತ್ಯ ಶಕ್ತಿಗಳು ಜಿ20ನ ಕಾರ್ಯಸೂಚಿಯನ್ನು "ಉಕ್ರೇನೀಕರಣ" (Ukrainise) ಮಾಡುವ ಪ್ರಯತ್ನ ವಿಫಲವಾಗಿದೆ'' ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಹೇಳಿದರು.
ಜಿ20 ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗ್ಲೋಬಲ್ ಸೌತ್‌ನ ಪ್ರತಿನಿಧಿಗಳನ್ನು ಒಗ್ಗೂಡಿಸುವಲ್ಲಿ ಭಾರತ ಯಶಸ್ವಿಯಾಗಿದೆ ಎಂದು ಲಾವ್ರೊವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿ20ಯ ಅಭಿವೃದ್ಧಿಶೀಲ ರಾಷ್ಟ್ರಗಳು ಉಕ್ರೇನ್‌ನಲ್ಲಿ ಏನು ನಡೆಯುತ್ತಿದೆ ಎಂಬುದರ ನಿಜವಾದ ಚಿತ್ರಣ ಹೊಂದಿವೆ. ಉಕ್ರೇನಿಯನ್ ಆಡಳಿತವು ತನ್ನ ದೇಶದ ಪ್ರಾದೇಶಿಕ ಸಮಗ್ರತೆಯನ್ನು ನಾಶಪಡಿಸುತ್ತಿದೆ ಎಂದು ಅವರು ಆರೋಪಿಸಿದರು.
ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆ ಹಲವು ವಿಧಗಳಲ್ಲಿ ಪ್ರಗತಿ ಸಾಧಿಸಿದೆ ಎಂದು ಲಾವ್ರೊವ್ ಬಣ್ಣಿಸಿದರು. ಶೃಂಗದ ಫಲಿತಾಂಶಗಳು ಜಗತ್ತು ಎದುರಿಸುತ್ತಿರುವ ಹಲವಾರು ಸವಾಲುಗಳನ್ನು ದಿಟ್ಟವಾಗಿ ಎದುರಿಸಲು ಜಗತ್ತಿಗೆ ಮಾರ್ಗ ತೋರಿಸಿದೆ ಎಂದು ಜಿ20 ನಾಯಕರ ಘೋಷಣೆಯನ್ನು ಉಲ್ಲೇಖಿಸಿ ಹೇಳಿದರು.
ಉದಯೋನ್ಮುಖ ಆರ್ಥಿಕತೆಯ ದೇಶಗಳಾದ ಬ್ರೆಜಿಲ್, ದಕ್ಷಿಣ ಆಫ್ರಿಕಾ ಮತ್ತು ಇಂಡೋನೇಷ್ಯಾ ಘೋಷಣೆಯ ಒಪ್ಪಂದವನ್ನು ತಲುಪುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ವಿವಾದಾತ್ಮಕ ಉಕ್ರೇನ್ ಸಂಘರ್ಷದ ಕುರಿತು ಜಿ20 ದೇಶಗಳ ನಡುವೆ ಅನಿರೀಕ್ಷಿತ ಒಮ್ಮತ ಮೂಡಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಉಕ್ರೇನ್ ಸೇರಿದಂತೆ ಹಲವು ವಿಷಯಗಳ ಬಗ್ಗೆ ತಮ್ಮ ನಡೆಯನ್ನು ಹೇರದಂತೆ ಪಾಶ್ಚಿಮಾತ್ಯ ದೇಶಗಳನ್ನು ತಡೆಯುವಲ್ಲಿ ಭಾರತ ನಿರ್ಣಾಯಕ ಕೆಲಸ ಮಾಡಿದೆ ಎಂದು ಪ್ರಶಂಸಿಸಿದ್ದಾರೆ.
ಸಂಘರ್ಷ ಕೊನೆಗೊಳಿಸುವ ಮಾತುಕತೆಗೆ ಬದ್ಧ-ಲಾವ್ರೊವ್:''ಉಕ್ರೇನ್ ಸಂಘರ್ಷವನ್ನು ಕೊನೆಗೊಳಿಸುವ ಮಾತುಕತೆಗೆ ತಮ್ಮ ದೇಶ ವಿರುದ್ಧವಾಗಿಲ್ಲ. ಆದರೆ, ನೆಲದ ವಾಸ್ತವತೆಗಳನ್ನು ಮತ್ತು ನ್ಯಾಟೋದ ಆಕ್ರಮಣಕಾರಿ ನೀತಿಯಿಂದ ಉಂಟಾಗುವ ಕಾರಣಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಲಾವ್ರೊವ್ ಹೇಳಿದ್ದಾರೆ. ಸುಮಾರು 18 ತಿಂಗಳ ಹಿಂದೆ ಸಂಘರ್ಷವನ್ನು ಪರಿಹರಿಸಲು ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿಕೊಂಡರು, ಮತ್ತು ಈ ನಿಟ್ಟಿನಲ್ಲಿ ದಾಖಲೆಗಳಿಗೆ ಸಹಿ ಹಾಕಲಾಗಿದೆ. ಇದಕ್ಕೆ ಪಶ್ಚಿಮ ದೇಶಗಳು ಅಡೆತಡೆಗಳನ್ನು ಉಂಟು ಮಾಡುತ್ತಿವೆ'' ಎಂದು ದೂರಿದರು.
ಶೃಂಗಸಭೆಯ ಘೋಷಣೆಯು ಯುಎನ್ ಚಾರ್ಟರ್ ಪ್ರಕಾರ, ವಿಶ್ವದ ಮಿಲಿಟರಿ ಸಂಘರ್ಷಗಳನ್ನು ಪರಿಹರಿಸಬೇಕು. ಪಾಶ್ಚಿಮಾತ್ಯ ಶಕ್ತಿಗಳು ವಿವಿಧ ಬಿಕ್ಕಟ್ಟುಗಳ ಪರಿಹಾರದ ಪರಿಕಲ್ಪನೆಗಳೊಂದಿಗೆ ಮುಂದುವರಿಯಲು ಸಾಧ್ಯವಾಗುವುದಿಲ್ಲ ಎಂಬ ಸಂದೇಶವನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಅಂಥ ಗುರಿಗಳನ್ನು ಸಾಧಿಸಲು (ಜಾಗತಿಕ ಆರ್ಥಿಕತೆಯಲ್ಲಿ ಹಿತಾಸಕ್ತಿಗಳ ಸಮತೋಲನವನ್ನು ಖಾತ್ರಿಪಡಿಸುವ) ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದ ಶೃಂಗಸಭೆಯು ಒಂದು ಮಹತ್ವದ ಘಟನೆ" ಎಂದು ಲಾವ್ರೊವ್ ಭಾರತದ ಅಧ್ಯಕ್ಷತೆಯನ್ನು ಶ್ಲಾಘಿಸಿದರು.
ದೆಹಲಿಯಲ್ಲಿ ನಡೆದ ಶೃಂಗಸಭೆಯು ಜಾಗತಿಕ ಆಡಳಿತ ಮತ್ತು ಜಾಗತಿಕ ಹಣಕಾಸು ಕ್ಷೇತ್ರದಲ್ಲಿಯೂ ನ್ಯಾಯ ಒದಗಿಸಿದೆ. ಜಿ20ಯನ್ನು ರಾಜಕೀಯಗೊಳಿಸುವ ಪ್ರಯತ್ನಗಳನ್ನು ತಡೆಗಟ್ಟಿದ್ದಕ್ಕಾಗಿ ನಾನು ಭಾರತಕ್ಕೆ ಕೃತಜ್ಞತೆ ಹೇಳ ಬಯಸುತ್ತೇನೆ. ಜಗತ್ತಿನಲ್ಲಿ ಹೊಸ ಅಧಿಕಾರ ಕೇಂದ್ರಗಳು ಬರುವುದನ್ನು ನಾವು ನೋಡುತ್ತಿದ್ದು, ಪಶ್ಚಿಮದ ಅಧಿಪತ್ಯ ಇನ್ನು ಉಳಿಗಾಲವಿಲ್ಲ ಎಂದರು. (ಪಿಟಿಐ)
ಇದನ್ನೂ ಓದಿ:ಭಾರತದಂತಹ ದೇಶ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯನಾದರೆ ಹೆಮ್ಮೆ: ಟರ್ಕಿ ಅಧ್ಯಕ್ಷ ಎರ್ಡೋಗನ್