ಕೋಲ್ಕತ್ತ: ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎನ್ನಲಾದ ಹಿಂಸಾಚಾರ ವಿಚಾರ ಇಂದಿನಿಂದ ಆರಂಭವಾದ ವಿಧಾನಸಭೆ ಅಧಿವೇಶನದಲ್ಲಿ ಪ್ರತಿಧ್ವನಿಸಿದ್ದು, ವಿರೋಧ ಪಕ್ಷ ಬಿಜೆಪಿ ನಡೆಸಿದ ಪ್ರತಿಭಟನೆಯಿಂದ ಭಾರಿ ಗದ್ದಲ ಉಂಟಾಗಿದೆ.
ಪಶ್ಚಿಮ ಬಂಗಾಳ ವಿಧಾನಸಭೆ ಕಲಾಪದಲ್ಲಿ ಗದ್ದಲ-ಕೋಲಾಹಲ ರಾಜ್ಯಪಾಲ ಜಗದೀಪ್ ಧನಕರ್ ಸದನವನ್ನುದ್ದೇಶಿಸಿ ಭಾಷಣ ಆರಂಭಿಸಲು ಮುಂದಾದಾಗ ಬಿಜೆಪಿ ಶಾಸಕರು ಘೋಷಣೆಗಳನ್ನು ಕೂಗಿದರು. ಇದರ ನಡುವೆ ರಾಜ್ಯಪಾಲರು ಭಾಷಣ ಆರಂಭಿಸಲು ನಿರಾಕರಿಸಿ ಸದನದಿಂದ ಹೊರಹೋಗಲು ಯತ್ನಿಸಿದಾಗ ಆಡಳಿತ ಪಕ್ಷದ ಸದಸ್ಯರು ಒಪ್ಪಲಿಲ್ಲ.
ಗದ್ದಲದ ನಡುವೆಯೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರು ಭಾಷಣಕ್ಕೆ ಮುಂದುವರಿಯುವಂತೆ ರಾಜ್ಯಪಾಲ ಜಗದೀಪ್ ಅವರನ್ನು ಕೋರಿದರು. ಭಾಷಣ ಮಾಡದೆ ಸದನದಿಂದ ಹೊರಹೋಗಲು ಪ್ರಯತ್ನಿಸಿದಾಗ ತೃಣಮೂಲ ಕಾಂಗ್ರೆಸ್‌ನ ಮಹಿಳಾ ಶಾಸಕಿಯರು ರಾಜ್ಯಪಾಲರ ಎದುರು ಜಮಾಯಿಸಿ ಸದನದಿಂದ ಹೊರಹೋಗದಂತೆ ತಡೆದರು. ಅಂತಿಮವಾಗಿ ರಾಜ್ಯಪಾಲರು ತಮ್ಮ ಭಾಷಣದ ಮೊದಲ ಮತ್ತು ಕೊನೆಯ ಸಾಲನ್ನು ಓದಿ ಸದನದಿಂದ ನಿರ್ಗಮಿಸಿದ ಒಂದು ತಾಸಿನ ನಂತರ ಗದ್ದಲ ತಹಬದಿಗೆ ಬಂದಿದೆ.
ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ ಕೇಸ್: 'ಮಹಾ' ಸಚಿವ ನವಾಬ್ ಮಲಿಕ್ಗೆ ನ್ಯಾಯಾಂಗ ಬಂಧನ