ಹೈದರಾಬಾದ್(ತೆಲಂಗಾಣ): ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಬಿಜೆಪಿ 2022ರ ಮೊದಲ ವಾರದಲ್ಲಿ ಮೂರು ದಿನಗಳ ಸಮನ್ವಯ ಸಭೆಯನ್ನು ಕರೆದಿದ್ದು, ಹೈದರಾಬಾದ್ಗೆ ಭಾಗ್ಯನಗರ ಎಂದು ಮರುನಾಮಕರಣ ಮಾಡುವ ಕಾರ್ಯಸೂಚಿಯನ್ನು ಮತ್ತೊಮ್ಮೆ ಪರೋಕ್ಷವಾಗಿ ಪ್ರಸ್ತಾಪಿಸಿದೆ.
ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ಹಾಗೂ ವಿವಿಧ ಅಂಗ ಸಂಸ್ಥೆಗಳು ಕಾರ್ಯವೈಖರಿ ಮತ್ತು ಚುನಾವಣೆಗೆ ಮಾಡಿಕೊಳ್ಳುತ್ತಿರುವ ಸಿದ್ಧತೆ ಬಗ್ಗೆ ಈ ಸಮನ್ವಯ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಆರ್‌ಎಸ್‌ಎಸ್ ಈ ಕುರಿತು ಟ್ವೀಟ್ ಮಾಡಿದ್ದು, 'ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್‌ಎಸ್‌ಎಸ್‌ನಿಂದ ಪ್ರೇರಿತವಾಗಿರುವ ವಿವಿಧ ಸಂಘಟನೆಗಳ ಮುಖ್ಯ ಪದಾಧಿಕಾರಿಗಳ ಸಮನ್ವಯ ಸಭೆ 2022ರ ಜನವರಿ 5 ರಿಂದ 7ರವರೆಗೆ ತೆಲಂಗಾಣದ ಭಾಗ್ಯನಗರದಲ್ಲಿ ನಡೆಯಲಿದೆ- ಸುನಿಲ್ ಅಂಬೇಕರ್' ಎಂದು ಉಲ್ಲೇಖಿಸಿದೆ. ಈ ಮೂಲಕ ಹೈದರಾಬಾದ್ ಎಂಬ ಹೆಸರಿನ ಬದಲು ಭಾಗ್ಯನಗರ ಎಂದು ಉಲ್ಲೇಖಿಸಲಾಗಿದೆ.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಮತ್ತು ಜಂಟಿ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್ ಮತ್ತು ಅಂಗಸಂಸ್ಥೆಗಳ ಇತರ ಉನ್ನತ ಪದಾಧಿಕಾರಿಗಳು ಈ ವಾರ್ಷಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಬೇಕೆಂಬ ಬೇಡಿಕೆಯನ್ನು ಆರ್‌ಎಸ್‌ಎಸ್ ಮತ್ತು ಭಾರತೀಯ ಜನತಾ ಪಕ್ಷ ಕೆಲವು ವರ್ಷಗಳಿಂದ ಎತ್ತುತ್ತಿವೆ ಎಂಬುದು ಉಲ್ಲೇಖನೀಯ. 2020ರ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಸಂದರ್ಭದಲ್ಲಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಫೈಜಾಬಾದ್ ಅನ್ನು ಅಯೋಧ್ಯೆ ಮತ್ತು ಅಲಹಾಬಾದ್ ಅನ್ನು ಪ್ರಯಾಗ್ರಾಜ್ ಎಂದು ಮರುನಾಮಕರಣ ಮಾಡಿದಂತೆ ಹೈದರಾಬಾದ್ನ್ನು ಭಾಗ್ಯನಗರ ಎಂದು ಹೆಸರು ಬದಲಿಸುತ್ತೇವೆ ಎಂದು ಪ್ರಚಾರದಲ್ಲಿ ಘೋಷಿಸಿದ್ದರು.
ಇದನ್ನೂ ಓದಿ:ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮೊಮ್ಮಗಳ ಮದುವೆ ಆರತಕ್ಷತೆ; ಅಮಾನತುಗೊಂಡ ಸಂಸದರು ಹಾಜರ್