ಕರ್ನಾಟಕ

karnataka

ETV Bharat / bharat

ಶಾಲೆಗೆ 4 ಕೋಟಿ ರೂ. ಮೌಲ್ಯದ ಜಮೀನು ದಾನ: ಆಯಿ ಪುರನಮ್ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ - ಕೋಡಿಕುಲಂ ಮಾಧ್ಯಮಿಕ ಶಾಲೆ

ಕೋಡಿಕುಲಂ ನಿವಾಸಿ ಆಯಿ ಪುರನಮ್ ಎಂಬುವರು ಸರ್ಕಾರಿ ಶಾಲೆಗಾಗಿ 4 ಕೋಟಿ ರೂಪಾಯಿ ಮೌಲ್ಯದ ಜಮೀನು ದಾನ ಮಾಡಿದ್ದಾರೆ.

Woman Donates Rs. 4 Crore Land for Govt School Upliftment
Woman Donates Rs. 4 Crore Land for Govt School Upliftment

By ETV Bharat Karnataka Team

Published : Jan 12, 2024, 7:04 PM IST

ಮದುರೈ : ಶಾಲಾ ಕಟ್ಟಡ ನಿರ್ಮಾಣಕ್ಕಾಗಿ 4 ಕೋಟಿ ರೂ. ಮೌಲ್ಯದ 1 ಎಕರೆ 52 ಸೆಂಟ್ಸ್​ ಜಾಗವನ್ನು ದಾನ ನೀಡಿದ ಕೋಡಿಕುಲಂ ಗ್ರಾಮದ ನಿವಾಸಿ ಆಯಿ ಪುರನಮ್ ಅವರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಮದುರೈನ ಸಂಸದ ಎಸ್​. ವೆಂಕಟೇಶನ್ ಕೂಡ ಆಯಿ ಪುರನಮ್ ಅವರನ್ನು ಶ್ಲಾಘಿಸಿ ಸನ್ಮಾನಿಸಿದ್ದಾರೆ. ಕೋಡಿಕುಲಂ ಮಾಧ್ಯಮಿಕ ಶಾಲೆಯನ್ನು ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿಸಿ ಈ ಪ್ರದೇಶದ ಮಕ್ಕಳಿಗೆ ಹೆಚ್ಚಿನ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಅವರು ತಮ್ಮ ಜಮೀನು ದಾನ ಮಾಡಿದ್ದಾರೆ.

ಆಯಿ ಪುರನಮ್ ಅವರನ್ನು ಅಭಿನಂದಿಸಿದ ಸಂಸದ ವೆಂಕಟೇಶನ್

ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಕ್ಲರ್ಕ್ ಆಗಿರುವ ಆಯಿ ಪುರನಮ್ ತಮ್ಮ ಮಗಳು ಜನನಿ ಅವರ ನೆನಪಿಗಾಗಿ ಸುಮಾರು 4 ಕೋಟಿ ರೂ.ಗಳ ಮೌಲ್ಯದ ಭೂಮಿಯನ್ನು ದಾನ ಮಾಡಿದ್ದಾರೆ. ಇದೇ 10 ರಂದು ನಡೆದ ಅಧಿಕೃತ ಭೂದಾನ ಪತ್ರದ ಹಸ್ತಾಂತರ ಸಮಾರಂಭದಲ್ಲಿ ಮದುರೈ ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿ ಕಾರ್ತಿಕಾ, ಜಿಲ್ಲಾ ಶಿಕ್ಷಣಾಧಿಕಾರಿ ಸುಬ್ಬರಾಜ್, ಜಿಲ್ಲಾ ಶಿಕ್ಷಣಾಧಿಕಾರಿ ಎಸ್ತರ್ ಇಂದೂರಾಣಿ ಸೇರಿದಂತೆ ಇತರ ಗಣ್ಯರು ಪುರನಮ್ ಅವರನ್ನು ಸನ್ಮಾನಿಸಿದರು. ಆಯಿ ಪುರನಮ್ ಅವರ ಕೊಡುಗೆಯ ಬಗ್ಗೆ ತಿಳಿದ ಸಂಸದ ವೆಂಕಟೇಶನ್, ವೈಯಕ್ತಿಕವಾಗಿ ಅವರ ಬಳಿಗೆ ತೆರಳಿ ಕೃತಜ್ಞತೆ ಸಲ್ಲಿಸಿದರು.

ಕೋಡಿಕುಲಂ ಪಂಚಾಯತ್ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸಂಪೂರ್ಣಂ ಅವರು ಆಯಿ ಪುರನಮ್ ಅವರ ಕಾರ್ಯಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ಮಾಜಿ ವಿದ್ಯಾರ್ಥಿಯಾಗಿ ಪುರನಮ್ ಅವರು ಶಾಲೆಯೊಂದಿಗೆ ಈಗಲೂ ಇಟ್ಟುಕೊಂಡಿರುವ ಬಾಂಧವ್ಯ ಸ್ಮರಿಸಿದರು. ದಾನ ಮಾಡಿದ ಭೂಮಿಯು ಆಯಿ ಪುರನಮ್ ಅವರ ದಿವಂಗತ ಮಗಳು ಜನನಿ ಅವರ ಹೆಸರಿನಲ್ಲಿರುವ ಶಾಲೆಯನ್ನು ಮಾಧ್ಯಮಿಕ ಶಾಲೆಯಿಂದ ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿಸಲು ಅನುಕೂಲವಾಗಲಿದೆ. ಪ್ರಸ್ತುತ ಮಾಧ್ಯಮಿಕ ಶಾಲೆಯಾಗಿ 140 ವಿದ್ಯಾರ್ಥಿಗಳನ್ನು ಹೊಂದಿರುವ ಇದನ್ನು ಪ್ರೌಢಶಾಲೆಯಾಗಿ ಪರಿವರ್ತಿಸುವುದರಿಂದ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಕಲಿಕೆಯ ಅವಕಾಶ ಸಿಗುವ ನಿರೀಕ್ಷೆಯಿದೆ.

ನಾಲ್ಕು ವರ್ಷಗಳ ಹಿಂದೆ ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಜನನಿ ಅಕಾಲಿಕವಾಗಿ ನಿಧನರಾಗಿದ್ದರು. ಈ ಸಂದರ್ಭದಲ್ಲಿ ಮಕ್ಕಳ ಶಿಕ್ಷಣದ ಸುಧಾರಣೆಗಾಗಿ ಪಿತ್ರಾರ್ಜಿತ ಆಸ್ತಿಯನ್ನು ದಾನ ಮಾಡಲು ಆಯಿ ಪುರನಮ್ ನಿರ್ಧರಿಸಿದರು. ವೈಯಕ್ತಿಕವಾಗಿ ಮಗಳನ್ನು ಕಳೆದುಕೊಂಡ ನೋವು ಅನುಭವಿಸುತ್ತಿದ್ದರೂ ಪುರನಮ್ ನಿಸ್ವಾರ್ಥ ಕಾರ್ಯದ ಮೂಲಕ ತನ್ನ ಮಗಳ ಹೆಸರನ್ನು ಚಿರಸ್ಥಾಯಿಯಾಗಿಸಲು ಅವರು ನಿರ್ಧರಿಸಿದರು.

ಇದನ್ನೂ ಓದಿ :ರಾಷ್ಟ್ರೀಯ ಯುವ ದಿನ; ಯುವಶಕ್ತಿಯ ಸದ್ಬಳಕೆಯೇ ಬಲಶಾಲಿ ಭಾರತಕ್ಕೆ ಬುನಾದಿ

ABOUT THE AUTHOR

...view details