ಹೈದರಾಬಾದ್:ಹೊಸ ವರ್ಷಾಚರಣೆ ವೇಳೆ ಮದ್ಯಪ್ರಿಯರು ಮೋಜು, ಮಸ್ತಿ ಮಾಡಿದ್ದಾರೆ. ವರ್ಷದ ಕೊನೆಯ ದಿನದಂದು ತೆಲಂಗಾಣದಲ್ಲಿ ಬರೋಬ್ಬರಿ 215.74 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. 2,17,399 ಮದ್ಯ ಹಾಗೂ 1,28,446 ಬಿಯರ್ಅನ್ನು ಮದ್ಯದಂಗಡಿಗಳಿಗೆ ಒದಗಿಸಲಾಗಿತ್ತು. ಕೊರೊನಾ ವೈರಸ್ ಹರಡಿದ ಬಳಿಕ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ.
ಕಳೆದ ವರ್ಷ ಕೊನೆಯ ದಿನ ರೂ.171.93 ಕೋಟಿ ಮೌಲ್ಯದ ಮದ್ಯ ಖರೀದಿಯಾಗಿತ್ತು. ಈ ಬಾರಿ ಸುಮಾರು ರೂ.43 ಕೋಟಿ ಹೆಚ್ಚು ಮಾರಾಟವಾಗಿದೆ. ಈ ವರ್ಷದ ಅಂತ್ಯದಲ್ಲಿ ಮಾರಾಟವು ಭಾರಿ ಹೆಚ್ಚಳವಾದಂತಾಗಿದೆ. ಕಳೆದ ಏಳು ದಿನಗಳಲ್ಲಿ ಬರೋಬ್ಬರಿ 1,111.29 ಕೋಟಿ ರೂ.ಗಳ ಮಾರಾಟ ನಡೆದಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ರೂ.925.92 ಕೋಟಿ ಮಾರಾಟವಾಗಿತ್ತು ಎಂಬುದು ಗಮನಾರ್ಹ. ಅಂದರೆ ಸುಮಾರು 185 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ಮದ್ಯದಂಗಡಿಗಳಲ್ಲಿ ಮಾರಾಟಕ್ಕೆ ಎರಡು ಗಂಟೆ ಹೆಚ್ಚುವರಿ ಸಮಯ ನೀಡಲಾಗಿತ್ತು. ಇದು ಮಾರಾಟದ ಏರಿಕೆಗೆ ಕಾರಣವಾದ ಪ್ರಮುಖ ಅಂಶವಾಗಿದೆ.