ಪಾಟ್ನಾ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ ಯಾದವ್ ವೈದ್ಯಕೀಯ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಆಗಮಿಸಿದ್ದಾರೆ. ಸಿಂಗಾಪುರ ಏರ್ ಪೋರ್ಟ್ ನಲ್ಲಿ ಪುತ್ರಿ ರೋಹಿಣಿ ಆಚಾರ್ಯ ತಂದೆಯನ್ನು ಬರಮಾಡಿಕೊಂಡರು. ಲಾಲೂ ಪ್ರಸಾದ್ ಸಿಂಗಾಪುರಕ್ಕೆ ಆಗಮಿಸಿದ ಬಗ್ಗೆ ರೋಹಿಣಿ ಟ್ವಿಟರ್ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.
ವಿಡಿಯೋದಲ್ಲಿ ಲಾಲೂ ಬಹಳ ಉತ್ಸಾಹದಿಂದಿರುವಂತೆ ಕಾಣಿಸುತ್ತಿದ್ದಾರೆ. ವಿಡಿಯೋದಲ್ಲಿ ಲಾಲೂ ವೀಲ್ ಚೇರ್ ಮೇಲೆ ಕುಳಿತಿರುವುದು ಕಾಣಿಸುತ್ತದೆ. ರೋಹಿಣಿ ತನ್ನ ತಂದೆಯ ಬಳಿಗೆ ಬಂದು ಪ್ರೀತಿಯಿಂದ ಸ್ವಾಗತಿಸುತ್ತಾಳೆ ಮತ್ತು ತಂದೆಯ ಪಾದ ಮುಟ್ಟಿ ನಮಸ್ಕರಿಸುತ್ತಾಳೆ.
ಲಾಲು ಯಾದವ್ ಗೆ ಸಿಂಗಾಪುರದಲ್ಲಿ ಚಿಕಿತ್ಸೆ: ಸಿಬಿಐ ನ್ಯಾಯಾಲಯದಿಂದ ಪಾಸ್ ಪೋರ್ಟ್ ಬಿಡುಗಡೆಯಾದ ಬಳಿಕ ಲಾಲೂ ಚಿಕಿತ್ಸೆಗಾಗಿ ಮಂಗಳವಾರ ದೆಹಲಿಯಿಂದ ಸಿಂಗಾಪುರಕ್ಕೆ ತೆರಳಿದ್ದರು. ಅವರು ಸಿಂಗಾಪುರದಲ್ಲಿ ಮೂತ್ರಪಿಂಡ ಕಸಿ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಮೇವು ಹಗರಣದ ಅಪರಾಧಿ ಲಾಲೂ ಪ್ರಸಾದ್ ಯಾದವ್ ಅವರ ಪಾಸ್‌ಪೋರ್ಟ್ ಈಗಾಗಲೇ ಸಿಬಿಐ ನ್ಯಾಯಾಲಯದ ಆದೇಶದ ನಂತರ ಬಿಡುಗಡೆಯಾಗಿದೆ. ಆರ್‌ಜೆಡಿ ಮುಖ್ಯಸ್ಥರ ಜೊತೆಗೆ ಅವರ ಹಿರಿಯ ಪುತ್ರಿ ಹಾಗೂ ರಾಜ್ಯಸಭಾ ಸಂಸದೆ ಮಿಸಾ ಭಾರ್ತಿ ಕೂಡ ಸಿಂಗಾಪುರಕ್ಕೆ ತೆರಳಿದ್ದಾರೆ. ಈ ಹಿಂದೆ ದೆಹಲಿಯಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಲಾಲೂ ಭಾಗವಹಿಸಿದ್ದರು. ಅಲ್ಲಿಂದ ನೇರವಾಗಿ ಸಿಂಗಾಪುರಕ್ಕೆ ಹೋದರು.
ಲಾಲು ಯಾದವ್‌ಗೆ ಜಾಮೀನು: ಮೇವು ಹಗರಣದ ಐದು ವಿಭಿನ್ನ ಪ್ರಕರಣಗಳಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ಗೆ ವಿಶೇಷ ಸಿಬಿಐ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಅರ್ಧ ಶಿಕ್ಷೆಯ ಅವಧಿ ಪೂರ್ಣಗೊಂಡಿರುವುದು, ಆರೋಗ್ಯದ ಕಾರಣಗಳು ಮತ್ತು ಅವರ ವಯಸ್ಸು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ನೀಡಿತ್ತು. ಲಾಲೂ ಪ್ರಸಾದ್ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ.
ಸಿಂಗಾಪುರದಲ್ಲಿ ಕಿಡ್ನಿ ಟ್ರಾನ್ಸ್‌ಪ್ಲಾಂಟ್‌ಗೆ ಅತ್ಯುತ್ತಮ ಸೌಲಭ್ಯ: ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆಗೆ ಸಿಂಗಾಪುರದಲ್ಲಿ ಅತ್ಯುತ್ತಮ ಸೌಲಭ್ಯವಿದೆ. ಇಲ್ಲಿ ಮೂತ್ರಪಿಂಡ ಕಸಿಯ ಸರಾಸರಿ ಯಶಸ್ಸಿನ ಪ್ರಮಾಣ ಸಾಕಷ್ಟು ಉತ್ತಮವಾಗಿದೆ. ಜೀವಂತ ದಾನಿಯಿಂದ ಮೂತ್ರಪಿಂಡವನ್ನು ಕಸಿ ಮಾಡಿದರೆ, ಅದರ ಯಶಸ್ಸಿನ ಪ್ರಮಾಣವು 98.11 ಪ್ರತಿಶತ ಇದೆ. ಆದರೆ, ಮರಣ ದಾನಿಯಿಂದ ಮೂತ್ರಪಿಂಡ ಕಸಿ ಮಾಡುವ ಯಶಸ್ಸಿನ ಪ್ರಮಾಣವು 94.88 ಪ್ರತಿಶತದಷ್ಟಿದೆ.
ಅದೇ ಸಮಯದಲ್ಲಿ, ನಾವು ಭಾರತದಲ್ಲಿ ಮೂತ್ರಪಿಂಡ ಕಸಿ ಯಶಸ್ಸಿನ ಅನುಪಾತವನ್ನು ನೋಡಿದರೆ, ಇದು ಸುಮಾರು 90 ಪ್ರತಿಶತವಾಗಿದೆ. ಜೀವಂತ ವ್ಯಕ್ತಿಯಿಂದ ಮೂತ್ರಪಿಂಡ ಕಸಿ ಮಾಡಿದ ಸಂದರ್ಭದಲ್ಲಿ ಜೀವಿತಾವಧಿಯು 12 ರಿಂದ 20 ವರ್ಷ ಮತ್ತು ಮೃತ ವ್ಯಕ್ತಿಯಿಂದ ಮೂತ್ರಪಿಂಡ ಕಸಿ ಮಾಡಿದರೆ ಜಿವಿತಾವಧಿ 8 ರಿಂದ 12 ವರ್ಷ ಹೆಚ್ಚಾಗುತ್ತದೆ ಎಂದು ವೈದ್ಯ ಲೋಕ ಹೇಳುತ್ತದೆ.
ಇದನ್ನೂ ಓದಿ: 9ನೇ ಕ್ಲಾಸ್ಗೆ ಪ್ಯೂನ್ ಕೆಲಸವೂ ಸಿಗಲ್ಲ, ಆದರೆ ತೇಜಸ್ವಿ ರಾಜ್ಯದ ಡಿಸಿಎಂ: ಪ್ರಶಾಂತ್ ಕಿಶೋರ್ ವಾಗ್ದಾಳಿ