ಸಿಕಾರ್(ರಾಜಸ್ಥಾನ): ಜವರಾಯನ ಅಟ್ಟಹಾಸಕ್ಕೆ ಒಂದೇ ಕುಟುಂಬದ ನಾಲ್ವರು ದುರ್ಮರಣಕ್ಕೀಡಾಗಿರುವ ಘಟನೆ ರಾಜಸ್ಥಾನದ ಸಿಕಾರ್ನಲ್ಲಿ ನಡೆದಿದೆ. ಇಂದು ಬೆಳಗ್ಗೆ ಸಂಭವಿಸಿದ ಈ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಜಲ್ಲಿಕಲ್ಲು ತುಂಬಿರುವ ಟ್ರಕ್ ಡಿಕ್ಕಿ ಹೊಡೆದಿರುವ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಜಿಲ್ಲೆಯ ಲಕ್ಷ್ಮಣಗಢ ಪೊಲೀಸ್ ಠಾಣೆ ವ್ಯಾಪ್ತಿಯ ಬಟ್ದನೌ ಗ್ರಾಮದ ಬಳಿ ರಸ್ತೆ ಅಪಘಾತ ನಡೆದಿದ್ದು, ಅಪಘಾತದಲ್ಲಿ ದಂಪತಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಕುಟುಂಬ ಸಲಾಸರ್‌ನಿಂದ ವಾಪಸ್ ಬರುತ್ತಿತ್ತು. ಜಲ್ಲಿಕಲ್ಲು ತುಂಬಿ ತೆರಳುತ್ತಿದ್ದ ಟ್ರಕ್ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನ ಸಲಾಸರ್ ಸರ್ಕಾರಿ ಆಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆ ನಡೆಸಿದರು.