ಹೈದರಾಬಾದ್:ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರ ಗದ್ದುಗೆ ಏರಿದ ಕಾಂಗ್ರೆಸ್ ಸಿಎಂ ಆಗಿ ರೇವಂತ್ ರೆಡ್ಡಿ ಅವರನ್ನು ನೇಮಕ ಮಾಡಿದೆ. ಅವರು ನಾಳೆ (ಡಿಸೆಂಬರ್ 7 ರಂದು) ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ರಾಜ್ಯದ ತುಂಬೆಲ್ಲಾ ಓಡಾಡಿ ಪಕ್ಷವನ್ನು ರಾಜ್ಯದ ಗದ್ದುಗೆ ಏರಿಸಿದ ಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿಗೆ ಅರ್ಹವಾಗಿಯೇ ಸಿಎಂ ಸ್ಥಾನ ದೊರೆತಿದೆ.
ಹಲವು ಹಿರಿಯ ನಾಯಕರು ಮುಖ್ಯಮಂತ್ರಿ ಹುದ್ದೆ ರೇಸ್ನಲ್ಲಿ ಇದ್ದ ಕಾರಣ ಆಯ್ಕೆ ವಿಳಂಬವಾಗಿತ್ತು. ಇತ್ತೀಚೆಗೆ ನಡೆದ ಸಿಎಲ್‌ಪಿ ಸಭೆಯಲ್ಲಿ ಒಮ್ಮತ ಮೂಡದ ಕಾರಣ ಆಯ್ಕೆಯ ಚೆಂಡನ್ನು ಹೈಕಮಾಂಡ್ ಅಂಗಳಕ್ಕೆ ಕಳುಹಿಸಲಾಗಿತ್ತು. ಸಂಸದ ರಾಹುಲ್ ಗಾಂಧಿ ಅವರು ತಮ್ಮ ಮೊದಲ ಆಯ್ಕೆ ರೇವಂತ್ ರೆಡ್ಡಿ ಎಂದು ಸೂಚಿಸಿದ್ದರು. ಇದರ ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕೆ.ಸಿ.ವೇಣುಗೋಪಾಲ್ ಕೂಡ ರೇವಂತ್ ಪರ ಒಲವು ಹೊಂದಿದ್ದರು. ಹೀಗಾಗಿ ಅವರ ಹೆಸರೇ ಅಖೈರುಗೊಳಿಸಲಾಯಿತು.
ಸಿಎಂ ಆಯ್ಕೆಯ ಕಸರತ್ತು ಹೀಗಿತ್ತು:ಚುನಾವಣಾ ಫಲಿತಾಂಶ ಘೋಷಣೆಯ ಬಳಿಕ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ನೇಮಿಸಿದ ವೀಕ್ಷಕರ ಗುಂಪು ಹೈದರಾಬಾದ್‌ನಲ್ಲಿ ಸೋಮವಾರ ಸಿಎಲ್‌ಪಿ ಸಭೆಯನ್ನು ಆಯೋಜಿಸಿತ್ತು. ಈ ಸಭೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹ ಮಾಡಲಾಯಿತು. ಸಭೆಗೂ ಮುನ್ನ ಕೆಲ ಹಿರಿಯ ನಾಯಕರು ಪ್ರತ್ಯೇಕವಾಗಿ ಡಿಕೆಶಿ ಅವರನ್ನು ಭೇಟಿ ಮಾಡಿದ್ದರು. ದಶಕಗಳ ಕಾಲ ಪಕ್ಷದ ಯಶಸ್ಸಿಗೆ ಶ್ರಮಿಸಿದ್ದರಿಂದ ತಮ್ಮನ್ನು ಸಿಎಂ ಹುದ್ದೆಯ ಉಮೇದುವಾರಿಕೆಗೆ ಪರಿಶೀಲಿಸುವಂತೆ ಕೋರಿಕೊಂಡಿದ್ದರು.
ಇದಲ್ಲದೇ ರೇವಂತ್ ರೆಡ್ಡಿ ಜೊತೆಗಿನ ಭಿನ್ನಾಭಿಪ್ರಾಯದ ಬಗ್ಗೆಯೂ ಗಮನಕ್ಕೆ ತರಲಾಯಿತು. ರೇವಂತ್ ಪಕ್ಷದ ತೆಲಂಗಾಣ ಅಧ್ಯಕ್ಷರಾದ ನಂತರ ಹಿರಿಯ ನಾಯಕರು ಮುನಿಸಿಕೊಂಡಿದ್ದರು. ತಮ್ಮೊಂದಿಗೆ ಸಮಾಲೋಚನೆ ನಡೆಸದೇ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದ ಬಗ್ಗೆಯೂ ದೂರಲಾಯಿತು. ಮುಖ್ಯಮಂತ್ರಿ ರೇಸ್‌ನಲ್ಲಿದ್ದ ಉತ್ತಮಕುಮಾರ್ ರೆಡ್ಡಿ, ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಹಾಗೂ ಶ್ರೀಧರ್ ಬಾಬು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದರು.
ಸಿಎಲ್‌ಪಿ ಸಭೆಯಲ್ಲಿ ಸಿಎಂ ಆಯ್ಕೆಯ ಬಗ್ಗೆ ಒಮ್ಮತ ಮೂಡದ ಕಾರಣ ಅದರ ಹೊಣೆಯನ್ನು ಎಐಸಿಸಿ ಅಧ್ಯಕ್ಷ ಖರ್ಗೆ ಅವರಿಗೆ ವಹಿಸುವ ನಿರ್ಣಯ ಅಂಗೀಕರಿಸಲಾಯಿತು. ಈ ವೇಳೆ 30ಕ್ಕೂ ಹೆಚ್ಚು ಶಾಸಕರು ರೇವಂತ್ ರೆಡ್ಡಿ ಹೆಸರನ್ನು ನೇರವಾಗಿ ಪ್ರಸ್ತಾಪಿಸಿದರೆ, ಉಳಿದ ಬಹುತೇಕರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದರು. ಇನ್ನು ಕೆಲವರು ಭಟ್ಟಿ ಮತ್ತು ಉತ್ತಮ್ಕುಮಾರ್ ಅವರ ಹೆಸರಿನ ಪರ ಬೆಂಬಲ ನೀಡಿದರು.
ರೇವಂತ್ಗೆ ಹೈಕಮಾಂಡ್ ಗ್ರೀನ್ ಸಿಗ್ನಲ್:ಶಾಸಕರು ಮತ್ತು ವೀಕ್ಷಕರ ಅಭಿಪ್ರಾಯಗಳನ್ನು ಆಲಿಸಿದ ಹೈಕಮಾಂಡ್ ಕೊನೆಗೆ ರೇವಂತ್ ರೆಡ್ಡಿ ಅವರನ್ನೇ ಸಿಎಂ ಆಗಿ ಆಯ್ಕೆ ಮಾಡಲು ಇಚ್ಚಿಸಿತು. ರಾಹುಲ್ ಗಾಂಧಿ ಅವರು ರೇವಂತ್ ಮೊದಲ ಆಯ್ಕೆ ಎಂದರೆ, ಉಳಿದವರು ಕೂಡ ಇದಕ್ಕೆ ಜೈ ಎಂದರು. ಬಳಿಕ ಕೆ.ಸಿ.ವೇಣುಗೋಪಾಲ್, ಡಿಕೆ ಶಿವಕುಮಾರ್ ಸಿಎಂ ಆಕಾಂಕ್ಷಿಗಳಾದ ಠಾಕ್ರೆ ಭಟ್ಟಿ ವಿಕ್ರಮಾರ್ಕ, ಉತ್ತಮ್ಕುಮಾರ್ ಅವರ ಜತೆ ಚರ್ಚಿಸಿದರು. ಸರ್ಕಾರದಲ್ಲಿ ಆದ್ಯತೆ ದೊರೆಯಲಿದೆ ಎಂದು ಭರವಸೆ ನೀಡುವ ಪ್ರಯತ್ನ ಮಾಡಿದರು. ಬಳಿಕ ಉತ್ತಮ್ ಮತ್ತು ಭಟ್ಟಿ ಸಮ್ಮುಖದಲ್ಲಿ ರೇವಂತ್ ರೆಡ್ಡಿ ಸಿಎಲ್‌ಪಿ ನಾಯಕರಾಗಲು ನಿರ್ಧರಿಸಿರುವುದಾಗಿ ಘೋಷಿಸಲಾಯಿತು. ಕೊನೆಗೂ ಸಿಎಂ ಆಯ್ಕೆ ಕಗ್ಗಂಟು ಮುಗಿದಿದ್ದು, ರೇವಂತ್ ರೆಡ್ಡಿ ಅವರು ಡಿಸೆಂಬರ್ 7 ರಂದು ಹೈದರಾಬಾದ್‌ನ ಎಲ್‌ಬಿ ಸ್ಟೇಡಿಯಂನಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ:ತೆಲಂಗಾಣಕ್ಕೆ ನನ್ನ ಆಯ್ಕೆ ರೇವಂತ್ ರೆಡ್ಡಿ: ರಾಹುಲ್ ಗಾಂಧಿ