ಕರ್ನಾಟಕ

karnataka

2022ಕ್ಕೆ ದಾಖಲೆ ಮಟ್ಟದಲ್ಲಿ ಸಿಮೆಂಟ್ ಬೆಲೆ ಏರಿಕೆ ಸಾಧ್ಯತೆ: ಕ್ರಿಸಿಲ್‌

ಕಲ್ಲಿದ್ದಲು ಮತ್ತು ವಿದ್ಯುತ್‌ ವೆಚ್ಚ ಹೆಚ್ಚಳವಾಗಿರುವುದು ಕಾರ್ಖಾನೆಗಳಿಗೆ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ 2022ಕ್ಕೆ ಸಿಮೆಂಟ್ ಬೆಲೆ ಸಹ ಏರಿಕೆಯಾಗಲಿದ್ದು, ಪ್ರತಿ ಚೀಲ ಚಿಲ್ಲರೆ ಸಿಮೆಂಟ್ ದರ 400 ರೂ. ತಲುಪುವ ನಿರೀಕ್ಷೆಯಿದೆ ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್ ತಿಳಿಸಿದೆ.

By

Published : Dec 3, 2021, 7:56 AM IST

Published : Dec 3, 2021, 7:56 AM IST

ಸಿಮೆಂಟ್ ಬೆಲೆ ಏರಿಕೆ
ಸಿಮೆಂಟ್ ಬೆಲೆ ಏರಿಕೆ

ನವದೆಹಲಿ: ಹೊಸ ವರ್ಷದ ಆರಂಭದಲ್ಲೇ ಗ್ರಾಹಕರಿಗೆ ಬೆಲೆ ಏರಿಕೆಯ ಹೊರೆ ಖಾತರಿಯಾಗಿದೆ. ಹೆಚ್ಚಿನ ಉತ್ಪಾದನಾ ವೆಚ್ಚದಿಂದಾಗಿ ಮುಂದಿನ ಹಣಕಾಸು ವರ್ಷಕ್ಕೆ ಪ್ರತಿ ಚೀಲ ಚಿಲ್ಲರೆ ಸಿಮೆಂಟ್ ದರ 400 ರೂ. ತಲುಪುವ ನಿರೀಕ್ಷೆಯಿದೆ.

ಪ್ರತಿಯೊಂದು ಸಿಮೆಂಟ್‌ ಕಾರ್ಖಾನೆಯೂ ವೆಚ್ಚ ಹೆಚ್ಚಳದ ಹೊರೆ ಎದುರಿಸುತ್ತಿದ್ದು ಅದನ್ನು ಗ್ರಾಹಕರಿಗೆ ವರ್ಗಾಯಿಸಲು ಸಜ್ಜಾಗಿದೆ. ಇದರ ಪರಿಣಾಮ ಸಿಮೆಂಟ್‌ ದರ ಏರಿಕೆಯಾಗಲಿದೆ. ಕಲ್ಲಿದ್ದಲು ಮತ್ತು ವಿದ್ಯುತ್‌ ವೆಚ್ಚ ಹೆಚ್ಚಳವಾಗಿರುವುದು ಕಾರ್ಖಾನೆಗಳಿಗೆ ಸವಾಲಾಗಿದೆ. ಮತ್ತೊಂದು ಕಡೆ, ಉಕ್ಕು ಕೂಡ ದುಬಾರಿಯಾಗುತ್ತಿದ್ದು, ನಿರ್ಮಾಣ ವೆಚ್ಚ ಕೂಡ ಹೆಚ್ಚಾಗಲಿದೆ.

ಕಲ್ಲಿದ್ದಲು ಮತ್ತು ಡೀಸೆಲ್ ಬೆಲೆ ಏರಿಕೆಯಾದ ಬಳಿಕ ಕಳೆದ ಆಗಸ್ಟ್‌ ತಿಂಗಳಿನಲ್ಲಿ ಪ್ರತಿ ಚೀಲ ಸಿಮೆಂಟ್​ಗೆ ಸರಾಸರಿ 10-15 ರೂ. ಹೆಚ್ಚಳ ಮಾಡಲಾಗಿತ್ತು. ಮುಂದಿನ ಕೆಲವು ತಿಂಗಳುಗಳಲ್ಲಿ ಮತ್ತೆ 15-20 ರೂ.ಗಳಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್ ತಿಳಿಸಿದೆ.

ಇದನ್ನೂ ಓದಿ:ಚರಂಡಿ ನೀರು, ತ್ಯಾಜ್ಯ ಬಳಸಿ ಬಸ್‌, ಕಾರು, ಟ್ರಕ್‌ಗಳ ಓಡಾಟ: 'ಗ್ರೀನ್‌ ಹೈಡ್ರೋಜನ್‌'ನತ್ತ ಗಡ್ಕರಿ ಚಿತ್ತ

ಅಷ್ಟೇ ಅಲ್ಲ, ಬಡ್ಡಿ, ತೆರಿಗೆ, ಸವಕಳಿ ಮತ್ತು ಭೋಗ್ಯ (ಇಬಿಐಟಿಡಿಎ) ಗಳ ಮೊದಲು ಗಳಿಕೆಯು FY22 ರಲ್ಲಿ (ಹಣಕಾಸು ವರ್ಷ-2022) ಪ್ರತಿ ಟನ್‌ಗೆ ರೂ 100-150 ರಷ್ಟು ಕುಸಿಯುವ ನಿರೀಕ್ಷೆಯಿದೆ. ವೆಚ್ಚದ ಹೊರೆಯನ್ನು ಸರಿದೂಗಿಸುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ರೇಟಿಂಗ್ ಏಜೆನ್ಸಿ ಹೇಳಿದೆ.

2021ರಲ್ಲಿ ಪ್ರಾದೇಶಿಕ ಮಟ್ಟದಲ್ಲಿ ಬೆಲೆ ಏರಿಕೆಯನ್ನು ನೋಡುವುದಾದ್ರೆ, ದಕ್ಷಿಣ ಭಾರತದಲ್ಲಿ ಅಕ್ಟೋಬರ್‌ನಲ್ಲಿ ಪ್ರತಿ ಚೀಲಕ್ಕೆ 54 ರೂ. ಏರಿಕೆ ಮಾಡಲಾಗಿತ್ತು. ಮಧ್ಯಪ್ರದೇಶದಲ್ಲಿ ಪ್ರತಿ ಸಿಮೆಂಟ್​ ಚೀಲಕ್ಕೆ 20 ರೂ., ಉತ್ತರ ಭಾರತದಲ್ಲಿ 12 ರೂ. ಹಾಗೂ ಪಶ್ಚಿಮ ಭಾರತದಲ್ಲಿ ಪ್ರತಿ ಚೀಲಕ್ಕೆ 10 ರೂ. ಹೆಚ್ಚಳ ಮಾಡಲಾಗಿದೆ.

ಕೋವಿಡ್‌ ಕೇಸ್‌ಗಳ ಸಂಖ್ಯೆ ತಗ್ಗಿದ ನಂತರ ಮೂಲಸೌಕರ್ಯ, ವಸತಿ ಮತ್ತು ಕೈಗಾರಿಕಾ ವಿಭಾಗಗಳಾದ್ಯಂತ ಬೇಡಿಕೆ ಹೆಚ್ಚಳವಾಗಿದೆ. ಪೂರೈಕೆಯ ಕೊರತೆಯೂ ಬೆಲೆ ಏರಿಕೆಗೆ ಕಾರಣವಾಗಿದೆ ಕ್ರಿಸಿಲ್ ಸಂಶೋಧನಾ ನಿರ್ದೇಶಕ ಇಶಾ ಚೌಧರಿ ಅಭಿಪ್ರಾಯ ವ್ಯಕ್ತಪಡಿಸಿದರು.

ABOUT THE AUTHOR

...view details