ನವದೆಹಲಿ: ಆರ್‌ಬಿಐ ತನ್ನ ಪ್ರಮುಖ ಬಡ್ಡಿದರಗಳಾದ ರೆಪೋ ಹಾಗು ರಿವರ್ಸ್ ರೆಪೋದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಸದ್ಯಕ್ಕೆ ರೆಪೋ ಹಾಗು ರಿವರ್ಸ್ ರೆಪೋ ದರಗಳು ಕ್ರಮವಾಗಿ ಶೇ 4 ಮತ್ತು ಶೇ 3.35ರಷ್ಟಿದೆ. ದೇಶದ ಆರ್ಥಿಕಾಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದರು.
ಹಣಕಾಸು ವರ್ಷ 2022 (2021-22)ರಲ್ಲಿ ದೇಶದ ಆರ್ಥಿಕ ವೃದ್ಧಿ ದರ ಶೇ 9.2ರಷ್ಟಿದ್ದು, ಇದು ದೇಶದ ಬೆಳವಣಿಗೆಯನ್ನು ಕೋವಿಡ್ ಸಾಂಕ್ರಾಮಿಕಕ್ಕೂ ಪೂರ್ವದ ವರ್ಷಕ್ಕೆ ಕೊಂಡೊಯ್ಯುತ್ತದೆ ಎಂದರು. ಇದೇ ರೀತಿ 2022-23ನೇ ಹಣಕಾಸು ವರ್ಷವು ಶೇ 7.8ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಅವರು ವಿವರಿಸಿದರು.
ದೇಶದಲ್ಲಿ ಹಣಕಾಸು ವರ್ಷ 2022ರಲ್ಲಿ ಸಗಟು ಹಣದುಬ್ಬರ ದರವು ಶೇ 5.3ರಷ್ಟಿರಲಿದ್ದು, 2022-23ರಲ್ಲಿ ಶೇ 4.5ರಷ್ಟಿರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ.
ಇದನ್ನು ಹೊರತುಪಡಿಸಿ, ಇ-ರುಪಿ ಡಿಜಿಟಲ್ ವೋಚರ್‌ಗಳಿಗಿದ್ದ ಸದ್ಯದ ಮಿತಿಯನ್ನು 10 ಸಾವಿರ ರೂಪಾಯಿಯಿಂದ 1 ಲಕ್ಷಕ್ಕೇರಿಸಲಾಗಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದರು.