ಶಿಮ್ಲಾ (ಹಿಮಾಚಲ ಪ್ರದೇಶ):ಹಿಮಾಚಲ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಠಾತ್ ಪ್ರವಾಹದಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ 15 ಮಂದಿ ನಾಪತ್ತೆಯಾಗಿದ್ದಾರೆ. ರಾಜ್ಯದ ಗಡಿಯಲ್ಲಿರುವ ಚಕ್ಕಿ ನದಿಗೆ ಅಡ್ಡಲಾಗಿ ಕಟ್ಟಲಾದ ರೈಲ್ವೆ ಸೇತುವೆಯೂ ಕುಸಿದು ಬಿದ್ದಿದೆ.
ಮಂಡಿ ಜಿಲ್ಲೆಯು ಮಳೆಗೆ ಭಾರೀ ಹಾನಿಗೀಡಾಗಿದೆ. ಜಿಲ್ಲೆಯ ಹಲವು ಪ್ರದೇಶಗಳಲ್ಲಿ ದುರಂತಗಳು ಸಂಭವಿಸಿವೆ. ಈವರೆಗೂ ನಾಲ್ವರು ಮೃತಪಟ್ಟ ಬಗ್ಗೆ ವರದಿಯಾಗಿದ್ದು, ಇನ್ನೂ 15 ಮಂದಿ ನಾಪತ್ತೆಯಾಗಿದ್ದಾರೆ. ಜೊತೆಗೆ ಚಂಬಾ, ಕಂಗ್ರಾ, ಹಮೀರ್‌ಪುರ, ಶಿಮ್ಲಾ ಮತ್ತು ಸಿರ್ಮೌರ್ ಪ್ರದೇಶಗಳೂ ಮಳೆ ಪೀಡಿತ ಜಿಲ್ಲೆಗಳಾಗಿವೆ. ಇನ್ನೊಂದೆಡೆ ಮಂಡಿ ಜಿಲ್ಲೆಯಲ್ಲಿ ಮನೆ ಕುಸಿದು ಗ್ರಾ.ಪಂ ಅಧ್ಯಕ್ಷ ಸೇರಿ 7 ಜನ ಮೃತಪಟ್ಟಿದ್ದಾರೆ.
ಭೂಕುಸಿತ, ಕೊಚ್ಚಿ ಹೋದ ಮನೆ:ಇನ್ನು ಕಶಾಂಗ್ಎಂಬಲ್ಲಿ ಮತ್ತೊಂದು ಘಟನೆ ನಡೆದಿದ್ದು, ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಒಂಬತ್ತು ಜನರು ಸಿಲುಕಿಕೊಂಡಿದ್ದಾರೆ. ಭೂಕುಸಿತದ ಅವಶೇಷಗಳಲ್ಲಿ ಅವರು ಸಮಾಧಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಚಂಬಾ ಜಿಲ್ಲೆಯ ಬಾನೆಟ್ ಗ್ರಾಮದಲ್ಲಿ ಭೂಕುಸಿತ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ. ಹಮೀರ್‌ಪುರ ಜಿಲ್ಲೆಯಲ್ಲಿ ಮಳೆ ನೀರಿನ ಪ್ರವಾಹದಲ್ಲಿ ಸಿಲುಕಿದ್ದ 22 ಜನರ ಪೈಕಿ 18 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಉಳಿದವರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ತಂಡ ತಿಳಿಸಿದೆ.
ಕುಸಿದು ಬಿದ್ದ ರೈಲ್ವೆ ಸೇತುವೆ:ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ಗಡಿಯಲ್ಲಿರುವ ಪಠಾಣ್‌ಕೋಟ್‌ನಲ್ಲಿ ಚಕ್ಕಿ ನದಿಯು ರಭಸದಿಂದ ಹರಿಯುತ್ತಿದ್ದು, 800 ಮೀಟರ್ ಉದ್ದದ ರೈಲ್ವೆ ಸೇತುವೆಯು ಪ್ರವಾಹಕ್ಕೆ ಸಿಲುಕಿ ಸೇತುವೆಯ ಪಿಲ್ಲರ್ ಕುಸಿದು ಬಿದ್ದಿದೆ.
1928 ರಲ್ಲಿ ಬ್ರಿಟಿಷರು ಈ ರೈಲ್ವೆ ಸೇತುವೆಯನ್ನು ನಿರ್ಮಾಣ ಮಾಡಿದ್ದರು. ಕಳೆದ ತಿಂಗಳು ಸೇತುವೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದವು. ಇದರಿಂದ ಈ ಮಾರ್ಗದ ರೈಲ್ವೆ ಸಂಚಾರನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮಳೆಗೆ ಸೇತುವೆ ಪಿಲ್ಲರ್ ಕೊಚ್ಚಿ ಹೋಗಿದೆ.