ತಿರುವನಂತಪುರಂ (ಕೇರಳ) : ಸರ್ಕಾರಿ ದಾಖಲೆಗಳಲ್ಲಿರುವ 'ಕೇರಳ' ಎಂಬ ಪದವನ್ನು 'ಕೇರಳಂ' ಎಂದು ಬದಲಿಸುವ ಮಹತ್ವದ ನಿರ್ಣಯವನ್ನು ಇಂದು ಕೇರಳ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಸರ್ವಾನುಮತದಿಂದ ಅಂಗೀಕರಿಸಿವೆ. ಮಾತೃಭಾಷೆಯ ಅಧಿಕೃತ ಭಾಷಾ ನೀತಿಯ ಭಾಗವಾಗಿ ಭಾರತದ ಸಂವಿಧಾನದ 8ನೇ ಪರಿಚ್ಛೇದದಲ್ಲಿ ರಾಜ್ಯದ ಅಧಿಕೃತ ಹೆಸರನ್ನು 'ಕೇರಳಂ' ಎಂದು ಬದಲಾಯಿಸಲು ಕೇಂದ್ರವನ್ನು ಕೋರುವ ನಿರ್ಣಯ ಇದಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಡಿಸಿದ ನಿರ್ಣಯದಲ್ಲಿ, ಸಂವಿಧಾನ ಮತ್ತು ಇತರ ಅಧಿಕೃತ ದಾಖಲೆಗಳಲ್ಲಿ ರಾಜ್ಯದ ಹೆಸರನ್ನು 'ಕೇರಳಂ' ಎಂದು ಬದಲಿಸಲು ಕೋರಲಾಯಿತು.
ನಿರ್ಣಯ ಮಂಡಿಸಿ ಮಾತನಾಡಿದ ಪಿಣರಾಯಿ ವಿಜಯನ್, "ನಮ್ಮ ರಾಜ್ಯದ ಹೆಸರು ಮಲಯಾಳಂ ಭಾಷೆಯಲ್ಲಿ 'ಕೇರಳಂ'. 1956ರ ನವೆಂಬರ್ 1ರಂದು ಭಾಷೆಯ ಆಧಾರದ ಮೇಲೆ ರಾಜ್ಯಗಳು ರಚನೆಯಾದವು. ಅದರಂತೆ, ನವೆಂಬರ್ 1ರಂದು ಕೇರಳ ರಚನೆಯಾಯಿತು. ಸಂವಿಧಾನದ 1ನೇ ಪರಿಚ್ಛೇದದಲ್ಲಿ ರಾಜ್ಯದ ಹೆಸರನ್ನು 'ಕೇರಳ' ಎಂದು ಬರೆಯಲಾಗಿದೆ. ಈ ನಿರ್ಣಯವು ಕೇಂದ್ರ ಸರ್ಕಾರ ತಿದ್ದುಪಡಿಗೆ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ವಾನುಮತದಿಂದ ವಿನಂತಿಸುತ್ತದೆ" ಎಂದು ಹೇಳಿದರು.
"2016ರ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಎಂ.ಎಂ.ಮಣಿ ಅವರು, ಇಂಗ್ಲಿಷ್ ದಾಖಲೆಗಳಲ್ಲಿ ಕೇರಳ ಎಂಬ ಹೆಸರನ್ನು ಕೇರಳ ಎಂದು ಬದಲಾಯಿಸುವಂತೆ ಒತ್ತಾಯಿಸಿದ್ದರು. ಆದರೆ ಇಲ್ಲಿಯವರೆಗೂ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ" ಎಂದು ಮುಖ್ಯಮಂತ್ರಿ ಪಿಣರಾಯಿ ತಿಳಿಸಿದರು.