ಚೆನ್ನೈ: ಪತ್ನಿಯಾದವಳು ಗಂಡ ತನಗೆ ಕಟ್ಟಿದ ತಾಳಿ (ಮಂಗಳಸೂತ್ರ)ಯನ್ನು ತೆಗೆದಿಡುವುದು ಅಂದರೆ ಅದು ಗಂಡನಿಗೆ ನೀಡುವ ಅತಿ ಹೆಚ್ಚಿನ ಮಾನಸಿಕ ಕ್ರೌರ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಮದ್ರಾಸ್ ಹೈಕೋರ್ಟ್, ಸಂತ್ರಸ್ತ ಗಂಡನಿಗೆ ವಿಚ್ಛೇದನ ದಯಪಾಲಿಸಿದೆ.
ಈರೋಡ್ ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಸಿ. ಶಿವಕುಮಾರ್ ಎಂಬುವರ ಅರ್ಜಿ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಾದ ವಿ.ಎಂ. ವೇಲುಮಣಿ ಮತ್ತು ಎಸ್. ಸೌಂದರ್ ಅವರ ಹೈಕೋರ್ಟ್ ವಿಭಾಗೀಯ ಪೀಠ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದೆ. ತನಗೆ ವಿಚ್ಛೇದನ ನಿರಾಕರಿಸಿ ಜೂನ್ 15, 2016 ರಂದು ಸ್ಥಳೀಯ ಕುಟುಂಬ ನ್ಯಾಯಾಲಯ ನೀಡಿದ ಆದೇಶವನ್ನು ವಜಾ ಮಾಡಬೇಕೆಂದು ಅರ್ಜಿದಾರರು ಕೋರಿದ್ದರು.
ಮಹಿಳೆಯನ್ನು ವಿಚಾರಣೆ ನಡೆಸಿದಾಗ, ಗಂಡನಿಂದ ದೂರವಿದ್ದ ಸಮಯದಲ್ಲಿ ಆಕೆ ತನ್ನ ತಾಳಿ ಸರವನ್ನು (ಮದುವೆಯಾದ ಸಂಕೇತವಾಗಿ ಹೆಂಡತಿ ಧರಿಸುವ ಪವಿತ್ರ ಸರ) ತೆಗೆದಿದ್ದಳು ಎಂದು ಒಪ್ಪಿಕೊಂಡಳು. ತಾನು ತಾಳಿಯನ್ನು ಉಳಿಸಿಕೊಂಡು ಸರವನ್ನು ಮಾತ್ರ ತೆಗೆದಿದ್ದೇನೆ ಎಂದು ಆಕೆ ವಿವರಿಸಲು ಮುಂದಾದಳು.
ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 7 ಪ್ರಕಾರ ತಾಳಿ ಕಟ್ಟುವ ಅಗತ್ಯವಿಲ್ಲ ಎಂದು ವಾದಿಸಿದ ಆಕೆಯ ವಕೀಲರು, ಒಂದು ವೇಳೆ ಆಕೆ ತಾಳಿಯನ್ನು ತೆಗೆದಿದ್ದು ಹೌದಾದರೂ ಈ ಕೃತ್ಯ ವೈವಾಹಿಕ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪ್ರತಿಪಾದಿಸಿದರು. ಆದರೆ, ಜಗತ್ತಿನ ಈ ಭಾಗದಲ್ಲಿ ಮದುವೆಯ ಸಂದರ್ಭದಲ್ಲಿ ತಾಳಿ ಕಟ್ಟುವುದು ಒಂದು ಅಗತ್ಯ ಆಚರಣೆಯಾಗಿದೆ ಎಂಬುದು ಎಲ್ಲರಿಗೂ ತಿಳಿದ ಸಾಮಾನ್ಯ ಜ್ಞಾನವಾಗಿದೆ ಎಂದು ಹೈಕೋರ್ಟ್ ಹೇಳಿತು.
ಹೈಕೋರ್ಟ್ನ ವಿಭಾಗೀಯ ಪೀಠವೊಂದರ ಆದೇಶವನ್ನು ಪ್ರಸ್ತಾಪಿಸಿದ ಕೋರ್ಟ್, "ಲಭ್ಯವಿರುವ ದಾಖಲೆಗಳ ಪ್ರಕಾರ ಅರ್ಜಿದಾರಳು ತಾಳಿಯನ್ನು ತೆಗೆದಿದ್ದಾಳೆ ಮತ್ತು ಅದನ್ನು ಬ್ಯಾಂಕ್ ಲಾಕರ್ನಲ್ಲಿ ಇಟ್ಟಿರುವುದಾಗಿ ಆಕಯೇ ಒಪ್ಪಿಕೊಂಡಿದ್ದಾಳೆ. ಗಂಡನಾದವ ಜೀವಂತವಿರುವವರೆಗೆ ಯಾವುದೇ ವಿವಾಹಿತ ಹಿಂದೂ ಮಹಿಳೆ ತಾಳಿಯನ್ನು ತೆಗೆಯುವುದಿಲ್ಲ ಎಂಬುದು ತಿಳಿದ ಸತ್ಯವಾಗಿದೆ." ಎಂದಿತು.
"ಮಹಿಳೆಯ ಕುತ್ತಿಗೆಯಲ್ಲಿನ ತಾಳಿಯು ಪವಿತ್ರವಾದ ವಿಷಯವಾಗಿದ್ದು, ಅದು ವೈವಾಹಿಕ ಜೀವನದ ನಿರಂತರತೆಯನ್ನು ಸಂಕೇತಿಸುತ್ತದೆ. ಅದನ್ನು ಗಂಡನ ಮರಣದ ನಂತರ ಮಾತ್ರ ತೆಗೆದುಹಾಕಲಾಗುತ್ತದೆ. ಆದ್ದರಿಂದ, ಅರ್ಜಿದಾರರು ಅಥವಾ ಹೆಂಡತಿ ಅದನ್ನು ತೆಗೆದುಹಾಕುವುದು ಮಾನಸಿಕ ಕ್ರೌರ್ಯದ ಪರಾಕಾಷ್ಠೆ ಎಂದು ನಾವು ಹೇಳಬಹುದು ಮತ್ತು ಈ ಕ್ರೌರ್ಯವು ಪ್ರತಿವಾದಿಗೆ ಸಂಕಟವನ್ನು ಉಂಟುಮಾಡಬಹುದು ಮತ್ತು ಭಾವನೆಗಳನ್ನು ನೋಯಿಸಬಹುದು.”ಎಂದು ಪೀಠ ಹೇಳಿತು.