ಸಿಕರ್ (ರಾಜಸ್ಥಾನ): ರಾಜಸ್ಥಾನದ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೃತೃತ್ವದ ಇಲ್ಲಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಕ್ಷ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಹುಚರ್ಚಿತ ಕೆಂಪು ಡೈರಿ ಪ್ರಸ್ತಾಪ ಮಾಡಿದ ಅವರು, ಈ ರಹಸ್ಯ ಕೆಂಪು ಡೈರಿ ಕಾಂಗ್ರೆಸ್ ಪಕ್ಷದ "ಝೂಟ್ ಕಿ ದುಕಾನ್"ನ (ಸುಳ್ಳಿನ ಅಂಗಡಿ) ಮತ್ತೊಂದು ಹೊಸ ಯೋಜನೆಯಾಗಿದೆ ಎಂದು ವ್ಯಂಗ್ಯವಾಡಿದರು.
ರಾಜೇಂದ್ರ ಸಿಂಗ್ ಗುಡಾ ಈ ಕೆಂಪು ಡೈರಿ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಸಚಿವ ಸ್ಥಾನದಿಂದ ವಜಾಗೊಂಡಿದ್ದಾರೆ. ಈ ಡೈರಿಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಅಕ್ರಮ ಹಣಕಾಸು ವ್ಯವಹಾರಗಳ ವಿವರಗಳು ಅಡಗಿದ್ದು ಇದೊಂದು ಕಾಂಗ್ರೆಸ್ನ "ಝೂಟ್ ಕಿ ದುಕಾನ್"ನ ಹೊಸ ಯೋಜನೆಯಾಗಿದೆ. ಇದೇ ಡೈರಿ ಮುಂಬರುವ ರಾಜ್ಯ ವಿಧಾನಸಭೆಯಲ್ಲ ಕಾಂಗ್ರೆಸ್ ಪಕ್ಷವನ್ನು ಸೋಲಿಸಲಿದೆ. ಕಾರಣ ಸೋಲಿಸುವಂತಹ ಕರಾಳ ಕೃತ್ಯಗಳು ಆ ಕೆಂಪು ಡೈರಿಯಲ್ಲಿ ದಾಖಲಾಗಿವೆ ಎಂದು ಅವರು ಹೇಳಿದ್ದಾರೆ.
ವಿವಿಧ ನೇಮಕಾತಿ ಅಕ್ರಮ ಸೇರಿದಂತೆ ಕಾಂಗ್ರೆಸ್ ಪಕ್ಷದ ಕರಾಳ ಕೃತ್ಯಗಳು ಆ ಕೆಂಪು ಡೈರಿಯಲ್ಲಿ ಅಡಗಿವೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರ ಯುವಜನರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ನೀಡಿದೆ. ಆದರೆ, ರಾಜಸ್ಥಾನದಲ್ಲಿ ಏನಾಗುತ್ತಿದೆ? ರಾಜಸ್ಥಾನದಲ್ಲಿ ಯುವಕರ ಭವಿಷ್ಯದೊಂದಿಗೆ ಆಟವಾಡುತ್ತಿದೆ. ನೇಮಕಾತಿ ಪತ್ರಿಕೆ ಸೋರಿಕೆ ಮಾಡುವುದರಲ್ಲಿ ತೊಡಗಿದೆ. ರಾಜ್ಯದ ಯುವಕರು ಸಮರ್ಥರಿದ್ದಾರೆ. ಆದರೆ, ಇಲ್ಲಿನ ಕಾಂಗ್ರೆಸ್ ಸರ್ಕಾರ ಅವರ ಭವಿಷ್ಯವನ್ನು ಹಾಳು ಮಾಡುತ್ತಿದೆ. ಯುವಕರ ಕನಸು ನನಸಾಗಿಸಲು ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದರು.
ತಾಳ್ಮೆಗೂ ಒಂದು ಮಿತಿ ಇದೆ. ಯಾವುದೇ ಕಾರಣಕ್ಕೂ ಇಲ್ಲಿನ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಸಹಿಸಿಕೊಳ್ಳುವುದಿಲ್ಲ ಎಂದು ರಾಜ್ಯದ ಜನರೇ ಹೇಳುತ್ತಿದ್ದಾರೆ. ಈ ಭ್ರಷ್ಟ ಸರ್ಕಾರ ತೊಲಗಬೇಕು. ಕಮಲ ಅರಳಬೇಕು ಎಂದು ಒಂದೇ ಒಂದು ಘೋಷಣೆ ಜನರಿಂದ ಕೇಳಿ ಬರುತ್ತಿದೆ. ಅದು ಈ ಬಾರಿ ಈಡೇರಲಿದೆ ಎಂದು ಅಶೋಕ್ ಗೆಹ್ಲೋಟ್ ನೃತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.